ಔಷಧ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 14 ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಹೊಸ ದಿಗಂತ ವರದಿ, ಮಂಡ್ಯ :

ಔಷಧ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿದಂತೆ 14 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಹೊಸಕೊಪ್ಪಲು ಬಳಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ತಾಂಡದವರೆನ್ನಲಾದ ಕಬ್ಬು ಕಡಿಯುವ ಕೂಲಿ ಕಾರ್ಮಿಕರಾದ ಚಂದ್ರನಾಯ್ಕ (26), ಮೀನಾಕ್ಷಿ ಬಾಯಿ (26), ಶಾಂತಾಬಾಯಿ (30), ಪಾಂಡುನಾಯ್ಕ (25), ರೇಣುಕಾನಾಯ್ಕ(25), ಸತ್ಯನಾಯ್ಕ (28), ಸೀತಾಬಾಯಿ (8), ಯೋಗೀಶ (10), ಅಂಬರೀಶ, ಯಕ್ಷ (5), ಸಂಜೀವ (8 ತಿಂಗಳು), ಬಾಲಾಜಿ (5), ಶರತ್ (6), ಆರತಿಬಾಯಿ (3) ಅವರುಗಳು ಅಸ್ವಸ್ಥರಾಗಿದ್ದಾರೆ.
ಬಳ್ಳಾರಿಯ ತಾಂಡಾದಲ್ಲಿ ವಾಸವಾಗಿದ್ದ 30 ಮಂದಿ ಮಕ್ಕಳು ಸೇರಿದಂತೆ ಕೂಲಿ ಕಾರ್ಮಿಕರು ತಾಲೂಕಿನ ಕೊಪ್ಪಗೆ ಕಬ್ಬು ಕಟಾವಿಗೆ ಬಂದಿದ್ದರು. ಬಳ್ಳೇಕೆರೆ ಸಮೀಪದಲ್ಲಿರುವ ರೈಸ್‌ಮಿಲ್ ಬಳಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.
ಸಮೀಪದಲ್ಲಿರುವ ಗದ್ದೆಯಲ್ಲಿ ದೊಡ್ಡ ಡ್ರಂ ಇರುವುದನ್ನು ಕಂಡ ಕೂಲಿ ಕಾರ್ಮಿಕರು ಜಮೀನಿನ ಮಾಲೀಕನನ್ನು ಕೇಳಿ ಪಡೆದಿದ್ದರು. ಅದರಲ್ಲಿ ನೀರು ಶೇಖರಿಸಿಕೊಂಡು ಕುಡಿದಿದ್ದರು. ಜಮೀನು ಮಾಲೀಕ ಮನೆಗೆ ತನ್ನ ಮಗನಿಗೆ ಕೂಲಿ ಕಾರ್ಮಿಕರಿಗೆ ಡ್ರಂ ನೀಡಿರುವ ವಿಚಾರ ತಿಳಿಸಿದ್ದ. ಅದನ್ನು ಏಕೆ ಕೊಟ್ಟೆ, ಅದರಲ್ಲಿ ನಾನು ಕ್ರಿಮಿನಾಶಕ ಬಳಸಿ ಗದ್ದೆಗೆ ಸಿಂಪಡಿಸಿದ್ದೆ ಎಂದು ಹೇಳಿದ್ದ. ಇದರಿಂದ ಆತಂಕಗೊಂಡ ಜಮೀನು ಮಾಲೀಕ ಗದ್ದೆ ಬಳಿ ಬಂದು ಕೂಲಿ ಕಾರ್ಮಿಕರಿಗೆ ನೀರು ಕುಡಿಯದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಅಷ್ಟರಲ್ಲಾಗಲೇ ಕೆಲವರು  ನೀರು ಕುಡಿದು ಹೊಟ್ಟೆ ಉರಿಯಿಂದ ಬಳಲುತ್ತಿದ್ದರು.
ತಕ್ಷಣ ಅವರನ್ನು ಸಮೀಪದ ಕೊಪ್ಪ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್‌ಗೆ ದಾಖಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!