ದೈವಾರಾಧನೆ ಹೆಸರಲ್ಲಿ ‘ಕೊರಗಜ್ಜ’ನಿಗೆ ಅಪಚಾರ: ದೈವಾರಾಧಕರ ಅಸಮಾಧಾನ

ಹೊಸ ದಿಗಂತ ವರದಿ, ಮಡಿಕೇರಿ :

ಕರಾವಳಿಯ ದೈವಗಳನ್ನು ಆಧರಿಸಿ ಬೆಳ್ಳಿ ತೆರೆಗೆ ಬಂದ ‘ಕಾಂತಾರ’ ಚಲನಚಿತ್ರ ದೈವಾರಾಧನೆಯ ಮಹತ್ವ ಮತ್ತು ಸೂಕ್ಷ್ಮಗಳನ್ನು ಇಡೀ ನಾಡಿಗೆ ತೋರಿಸಿಕೊಟ್ಟಿದೆ. ಆದರೆ ಇದರ ಬೆನ್ನಲ್ಲೆ ಕಾರಣಿಕ ದೈವ ‘ಕೊರಗಜ್ಜ’ನಿಗೆ ಅಪಚಾರವೆಸಗುವ ರೀತಿಯಲ್ಲಿ ಹೊರ ಜಿಲ್ಲೆಗಳಲ್ಲಿ ದೈವಾರಾಧನೆಯನ್ನು ವ್ಯಾಪಾರೀಕರಣಕ್ಕೆ ಬಳಸುತ್ತಿರುವುದು ಕಂಡು ಬಂದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಹಾಗೂ ಜಿಲ್ಲೆಯ ದೈವಾರಾಧಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ, ದೈವಾರಾಧನೆ ಒಳಗೊಂಡಿರುವ ಕಟ್ಟುಪಾಡುಗಳು, ನೇಮ ನಿಯಮಗಳು, ಮೌಲ್ಯಗಳನ್ನು ಮೀರಿ ಮೈಸೂರು, ಬೆಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಮೊದಲಾದೆಡೆಗಳಲ್ಲಿ ಕೊರಗಜ್ಜನ ಆರಾಧನೆಯ ಹೆಸರಿನಲ್ಲಿ ಹಣ ಮಾಡುವ ದಂಧೆ ತಲೆ ಎತ್ತಿದೆ. ಇದು ಅತೀವ ನೋವನ್ನುಂಟುಮಾಡಿದೆ ಎಂದು ಹೇಳಿದರು.
ತುಳುನಾಡು ಮತ್ತು ಕೊಡಗಿನ ನಡುವೆ ಅವಿನಾಭಾವ ಸಂಬಂಧವಿದ್ದು, ತುಳುನಾಡಿನ ಬಹಳಷ್ಟು ಮಂದಿ ಈ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ದೈವಾರಾಧನೆಯ ಸಂದರ್ಭ ತುಳುನಾಡಿನ ದೈವ ನರ್ತಕರನ್ನು ಇಲ್ಲಿಗೆ ಕರೆಸಿ ನಂಬಿಕೆಗೆ ಚ್ಯುತಿಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಇದನ್ನು ಮೀರಿ ನಿಯಮ ಬಾಹಿರವಾಗಿ ಹೊರ ಜಿಲ್ಲೆಗಳಲ್ಲಿ ದೈವಾರಾಧನೆ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿಭಾಗದಲ್ಲಿ ಇತ್ತೀಚೆಗೆ ನಡೆದ ದೈವಾರಾಧನೆಯಲ್ಲಿ ದೈವಕ್ಕೆ ನಿಂಬೆಹಣ್ಣು ಮಂತ್ರಿಸಿ ನೀಡುವ, ದೈವ ನರ್ತನದ ಸಂದರ್ಭ ಶಿಳ್ಳೆ ಹೊಡೆಯುವ ಘಟನಾವಳಿಗಳು ನಡೆದಿದೆ. ದೊಡ್ಡ ಬಳ್ಳಾಪುರದಲ್ಲಿ ಗೂಗಲ್ ಪೇ ಮೂಲಕ ಹಣ ಪಡೆದು ದೈವಾರಾಧನೆಯ ಪ್ರಸಾದ ಕಳುಹಿಸುವ ಅತ್ಯಂತ ಕಳವಳಕಾರಿ ಪ್ರಕರಣಗಳು ನಡೆದಿದೆ. ದೈವಾರಾಧನೆ ಎನ್ನುವುದು ಹಣ ಮಾಡುವ ದಂಧೆಯಲ್ಲವೆಂದು ರವಿ ಅಸಮಾಧಾನ ವ್ಯಕ್ತಪಡಿಸಿದರು.

ಅಗೇಲು ಅಗಳು ಆಗಿದೆ
 ದೈವಾರಾಧನೆಯ ಕೋಲ ಎನ್ನುವುದನ್ನು ‘ಮೇಳ’ ಎಂದು, ಅಗೇಲು ಸೇವೆಯನ್ನು ‘ಅಗಳು ಸೇವೆ’ ಎಂದು ಬದಲಿಸಿ ಅರ್ಥಹೀನಗೊಳಿಸಲಾಗಿದೆ. ಈ ರೀತಿಯ ಆಚರಣೆಗಳಿಗೆ ಪ್ರಗತಿಪರರೆಂದು ಕರೆಸಿಕೊಳ್ಳುವವರು ಬೆಂಬಲ ನೀಡುತ್ತಿರುವುದು ಸರಿಯಲ್ಲವೆಂದರು.
ಕಾಂತಾರ ಚಲನಚಿತ್ರದ ಬಳಿಕ ದೈವಾರಾಧನೆಯ ಮಹತ್ವ ಜಗತ್ತಿಗೆ ತಿಳಿದಿದೆ. ದೈವನರ್ತಕರಿಗೆ ಸರ್ಕಾರ ಮಾಸಾಶನದ ನೆರವನ್ನು ನೀಡಿರುವುದು ಸ್ವಾಗತಾರ್ಹ. ಆದರೆ ಶ್ರದ್ಧಾಭಕ್ತಿಯ ಪವಿತ್ರ ದೈವಾರಾಧನೆಗೆ ವಿಜೃಂಭಣೆಯ ಅಗತ್ಯವಿಲ್ಲವೆಂದರು.

ದೈವಾರಾಧಕರ ಸಭೆ

ಕೊಡಗು ಜಿಲ್ಲೆಯಲ್ಲಿರುವ ದೈವಾರಾಧಕರು ಹಾಗೂ ದೈವನರ್ತಕರ ಸಭೆ ನಡೆಸಲು ನಿರ್ಧರಿಸಲಾಗಿದೆ. ಆ ಮೂಲಕ ದೈವಾರಾಧನೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋಗುವ ಪ್ರಯತ್ನ ನಡೆಸಲಾಗುವುದು ಎಂದು ರವಿ ತಿಳಿಸಿದರು.
ದೈವಾರಾಧಕ ಕೆದಕಲ್‍ನ ಕೆ.ಎಂ.ಉಮೇಶ್ ಮಾತನಾಡಿ, ಹೊರ ಜಿಲ್ಲೆಗಳಲ್ಲಿ ಏಕಾಏಕಿ ಕೊರಗಜ್ಜನ ಆರಾಧನೆಯ ಆಚರಣೆಗಳು ಆರಂಭಗೊಂಡಿದ್ದು, ದೈವಾರಾಧನೆಯ ಹೆಸರಿನಲ್ಲಿ ಹಣ ಮಾಡುವ ಪ್ರಯತ್ನಗಳು ನಡೆಯಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಂದೂರಿನ ಕೋಟಿ ಚೆನ್ನಯ್ಯ ದೈವ ಆರಾಧಕ ಮುತ್ತಪ್ಪ ಪೂಜಾರಿ, ಹೆಬ್ಬೆಟ್ಟಗೇರಿ ಕಲ್ಲುರ್ಟಿ ದೈವ ಆರಾಧಕ ಬಿ.ಎಂ.ರಮೇಶ್ ಪೂಜಾರಿ, ಐಗೂರು ಪಾಷಾಣಮೂರ್ತಿ ದೈವಾರಾಧಕ ಆನಂದ ಪೂಜಾರಿ ಹಾಗೂ ಕೊರಗಜ್ಜನ ದೈವ ಆರಾಧಕ ಪಿ.ಸಿ.ಲೋಹಿತ್ ಹೆಬ್ಬೆಟ್ಟಗೇರಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!