ಹೊಸದಿಗಂತ ವರದಿ, ಮಡಿಕೇರಿ:
ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧಾ ಕಾರ್ಯಕ್ರಮಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಯುವಜನ ಸೇವಾ ಮತ್ತು ಕ್ರೀಡೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವ ಸಂಘಟನೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಗುಂಡು ಎಸೆಯುವ ಮೂಲಕ ಆಟೋಟ ಸ್ಪರ್ಧೆಗೆ ಚಾಲನೆ ನೀಡಿ, ಗುರಿ, ಛಲ ಇದ್ದಲ್ಲಿ ಸಾಧನೆ ಸಾಧ್ಯ ಎಂದು ತಿಳಿಸಿದರು.
ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಅವರು ಮಾತನಾಡಿ, ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಒಂದೊಳ್ಳೆಯ ಗುರಿ, ಛಲ ಇರಬೇಕು. ಸಂಸ್ಥೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ ಜಿಲ್ಲಾ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಯಶಸ್ವಿಯ ದಾರಿಯತ್ತ ನಡೆಯುತ್ತಿರುವ ಜಿಲ್ಲೆಯ ಸ್ಪರ್ಧಿಗಳನ್ನು ಪ್ರೋತ್ಸಾಹಿಸಿ ಮಹಿಳೆಯರನ್ನು ಭಾಗವಹಿಸಲು ಸ್ಪೂರ್ತಿ ತುಂಬಿದರು. ಸಿಕ್ಕ ಅವಕಾಶಗಳನ್ನು ತಪ್ಪದೇ ಬಳಸಿಕೊಳ್ಳಲು ಕರೆ ನೀಡಿದರು.
ಕಾಳು ಹೆಕ್ಕುವುದು, 50 ಮೀಟರ್ ಓಟ, ಭಾರದ ಗುಂಡೆಸೆತ, 100 ಮೀಟರ್ ಓಟ, ಸಂಗೀತ ಸ್ಪರ್ಧೆ, ನಗುವಿನೊಂದಿಗೆ ನಡಿಗೆ, ಒಳಗೊಂಡಂತೆ ಸುಮಾರು 15 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮೂರು ವರ್ಷದಿಂದ ಮೇಲ್ಪಟ್ಟ ಸ್ಪರ್ಧಿಗಳು ಭಾಗವಹಿಸಿದ್ದರು. ಒಟ್ಟು ನೂರು ಸ್ಪರ್ಧಿಗಳು ಭಾಗವಹಿಸಿದ್ದು 75 ಸ್ಪರ್ಧಿಗಳು ವಿಜೇತರಾದರು.
ಸ್ವಾಮಿ ವಿವೇಕಾನಂದ ಯುವ ಸಂಘಟನೆಯ ಸಲಹಾ ಸಮಿತಿ ಸದಸ್ಯ ಅಜಯ್ ಸೂದ್, ಆಪರ್ಚುನಿಟಿ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಶ್ರೀಧರ, ಕೊಡಗು ವಿದ್ಯಾಲಯದ ಮುಖ್ಯೋಪಾಧ್ಯಾಯ ಮಹೇಶ್ವರ, ಕೊಡಗು ಜಿಲ್ಲಾ ವಿಕಲಚೇತನರ ಸಂಘದ ಈಶ್ವರಿ, ಜಿಲ್ಲಾ ದಿವ್ಯಾಂಗ ಸಂಘ ಸಂಪನ್ಮೂಲ ವ್ಯಕ್ತಿಗಳಾದ ಸುನಿಲ್ ಮತ್ತು ನವೀನ, ಸಗಯ ಮೇರಿ, ಸಂತ ಮೈಕಲರ, ಹಾಕತ್ತೂರು ಮತ್ತು ಮಕ್ಕಂದೂರು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ