ದಿತ್ವಾ ಚಂಡಮಾರುತದ ಅಬ್ಬರ ಜೋರಾಗಿದ್ದು, ತಾಪಮಾನದಲ್ಲಿ ಕುಸಿತ ಕಂಡಿದೆ. ಇನ್ನೂ ಮೂರು ದಿನ ಮೈಕೊರೆಯುವ ಚಳಿ ಇರಲಿದ್ದು, ಶೀತ ಗಾಳಿ, ಚಳಿಗೆ ಸಿಲಿಕಾನ್ ಸಿಟಿ ಜನರು ನಡುಗುವಂತಾಗಿದೆ.
ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಚಳಿ, ಶೀತಗಾಳಿ ಜೋರಾಗಿದೆ. ಮನೆಯ ಹೊಸ್ತಿಲು ಸಹ ಗಡಗಡ ನಡುಗುವಷ್ಟು ಚಳಿ ಆವರಿಸಿದೆ. ಭಾನುವಾರ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿದೆ. ಬೆಂಗಳೂರಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಂಟಿಗ್ರೇಡ್ ದಾಖಲಾಗಿದೆ. ಇಂದು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣದಿಂದ ಹಗುರ ಮಳೆಯಾಗೋ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಈ ಚಳಿ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ಮಾಹಿತಿ ನೀಡಿದ್ದಾರೆ.
ಇನ್ನೂ ಈ ವಿಪರೀತ ಚಳಿಯಿಂದಾಗಿ ಮಕ್ಕಳು ಹಾಗೂ ವಯೋವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ನೆಗಡಿ, ತಲೆನೋವು, ಸಣ್ಣಪುಟ್ಟ ಜ್ವರದಿಂದಾಗಿ ತೆರಳುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ನಾಲ್ಕು ವರ್ಷದೊಳಗಿನ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡಿರುವ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯ ಒಪಿಡಿ ವಿಭಾಗ ಪುಲ್ ರಶ್ ಆಗುತ್ತಿವೆ. ಈ ಚಳಿಯ ರಕ್ಷಣೆಗಾಗಿ ಸ್ವೇಟರ್, ಮಂಕಿಕ್ಯಾಪ್ ಮೊದಲಾದವುಗಳಿಗೆ ಜನ ಮೊರೆ ಹೋಗುತ್ತಿದ್ದು, ಬೆಂಗಳೂರು ಚಳಿ ಊಟಿಯಂತೆ ಭಾಸವಾಗಿ, ಚಳಿ ಮೈ ಕೊರೆಯುತ್ತಿದೆ.
ದಿತ್ವಾ ಚಂಡಮಾರುತ ಎಫೆಕ್ಟ್: ಇನ್ನೂ ಮೂರು ದಿನ ಇರಲಿದೆ ಮೈ ಕೊರೆವ ಚಳಿ, ಆರೋಗ್ಯ ಜೋಪಾನ

