Monday, December 1, 2025

T10 ಫೈನಲ್‌| ‘ಡೇವಿಡ್’ ಅಬ್ಬರಕ್ಕೆ ಸ್ಟಾಲಿನ್ಸ್ ಛಿದ್ರ! ಚಾಂಪಿಯನ್ ಪಟ್ಟಕ್ಕೇರಿದ ಯುಎಇ ಬುಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬುಧಾಬಿ T10 ಲೀಗ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರ ಅಮೋಘ ಪ್ರದರ್ಶನದಿಂದಾಗಿ ಯುಎಇ ಬುಲ್ಸ್ ತಂಡವು ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಕಿರೀಟವನ್ನು ಅಲಂಕರಿಸಿದೆ.

ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಪ್ರಶಸ್ತಿ ಸುತ್ತಿನ ಕದನದಲ್ಲಿ ಯುಎಇ ಬುಲ್ಸ್ ಹಾಗೂ ಅಸ್ಪಿನ್ ಸ್ಟಾಲಿನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಅಸ್ಪಿನ್ ಸ್ಟಾಲಿನ್ಸ್ ಬೌಲಿಂಗ್ ಆಯ್ದುಕೊಂಡಿತು.

ಪ್ರಾರಂಭದಲ್ಲಿ ಉತ್ತಮ ಆಟ ಆಡದ ಯುಎಇ ಬುಲ್ಸ್ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟಿಮ್ ಡೇವಿಡ್ ಆಸರೆಯಾದರು. ಕ್ರೀಸ್‌ಗೆ ಬರುತ್ತಿದ್ದಂತೆ ಸಿಡಿಲಿನ ವೇಗದಲ್ಲಿ ಬ್ಯಾಟ್ ಬೀಸಿದ ಅವರು ಅಕ್ಷರಶಃ ರನ್ ಸುರಿಮಳೆಗೈದರು. ಮೈದಾನದ ಮೂಲೆ ಮೂಲೆಗೆ ಚೆಂಡು ಅಟ್ಟಿದ ಡೇವಿಡ್, 12 ಭರ್ಜರಿ ಸಿಕ್ಸರ್‌ಗಳು ಹಾಗೂ 3 ಫೋರ್‌ಗಳ ಸಹಿತ ಕೇವಲ 30 ಎಸೆತಗಳಲ್ಲಿ ಅಜೇಯ 98 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು.

ಡೇವಿಡ್ ಅವರ ಸ್ಫೋಟಕ ಆಟದ ಪರಿಣಾಮ, ಯುಎಇ ಬುಲ್ಸ್ ತಂಡವು ನಿಗದಿತ 10 ಓವರ್‌ಗಳಲ್ಲಿ 150 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

151 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಅಸ್ಪಿನ್ ಸ್ಟಾಲಿನ್ಸ್ ತಂಡವು ಯುಎಇ ಬುಲ್ಸ್ ಬೌಲರ್‌ಗಳ ಮುಂದೆ ತತ್ತರಿಸಿ ಹೋಯಿತು. 10 ಓವರ್‌ಗಳಲ್ಲಿ ಕೇವಲ 70 ರನ್‌ಗಳನ್ನು ಗಳಿಸಲಷ್ಟೇ ಶಕ್ತರಾದ ಸ್ಟಾಲಿನ್ಸ್, ಪ್ರಶಸ್ತಿಯಿಂದ ವಂಚಿತರಾದರು.

ಈ ಮೂಲಕ ಯುಎಇ ಬುಲ್ಸ್ ತಂಡವು 80 ರನ್‌ಗಳ ಭರ್ಜರಿ ಜಯ ದಾಖಲಿಸಿ, ಅಬುಧಾಬಿ ಟಿ10 ಲೀಗ್‌ನ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಟಿಮ್ ಡೇವಿಡ್ ಅವರ ವೈಯಕ್ತಿಕ ಪ್ರದರ್ಶನವೇ ಈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.

error: Content is protected !!