Monday, December 1, 2025

‘ಇನ್ಮುಂದೆ ಒಂದೇ ಫಾರ್ಮ್ಯಾಟ್’: ವಿರಾಟ್ ಕೊಹ್ಲಿಯಿಂದ ಬಿಗ್ ಅನೌನ್ಸ್ಮೆಂಟ್! ವಿಶ್ವಕಪ್‌ಗೆ ಸಿದ್ಧತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 17 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ವಿಜಯದ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾದದ್ದು ‘ಯಂಗ್ ಮ್ಯಾನ್’ ವಿರಾಟ್ ಕೊಹ್ಲಿ ಅವರಿಗೆ. ತಮ್ಮ 37ನೇ ವಯಸ್ಸಿನಲ್ಲೂ ವಿರಾಟ್ ತೋರಿಸಿದ ಕ್ರೀಡಾ ಸ್ಫೂರ್ತಿ ಮತ್ತು ಆಕ್ರಮಣಕಾರಿ ಆಟಕ್ಕೆ ಯುವ ಆಟಗಾರರೇ ನಾಚುವಂತಾಯಿತು.

ಪಂದ್ಯದ ಆರಂಭದಿಂದ ಕೊನೆಯವರೆಗೂ ಪಿಚ್ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿದ ಕಿಂಗ್ ಕೊಹ್ಲಿ, ಕೇವಲ 120 ಎಸೆತಗಳಲ್ಲಿ 7 ಸಿಕ್ಸರ್‌ಗಳು ಮತ್ತು 11 ಫೋರ್‌ಗಳ ನೆರವಿನಿಂದ 135 ರನ್‌ಗಳ ಮಹತ್ವದ ಇನ್ನಿಂಗ್ಸ್ ಕಟ್ಟಿದರು. ಈ ಭರ್ಜರಿ ಶತಕದ ನೆರವಿನಿಂದ ಭಾರತ ತಂಡವು ನಿಗದಿತ ಓವರ್‌ಗಳಲ್ಲಿ 349 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಈ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು 49.2 ಓವರ್‌ಗಳಲ್ಲಿ 332 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತವು 17 ರನ್‌ಗಳ ಜಯಭೇರಿ ಬಾರಿಸಿತು.

ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದ ಮುಖ್ಯ ವಿಷಯವೆಂದರೆ, ಅವರ ರೆಡ್ ಬಾಲ್ (ಟೆಸ್ಟ್) ಕಂಬ್ಯಾಕ್ ಕುರಿತಾದ ಹೇಳಿಕೆ.

ಭವಿಷ್ಯದಲ್ಲಿ ನಿಮ್ಮನ್ನು ಬೇರೆ ಫಾರ್ಮ್ಯಾಟ್‌ನಲ್ಲಿ ನೋಡಬಹುದೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, “ಇಲ್ಲ… ಇನ್ಮುಂದೆ ನಾನು ಒಂದೇ ಫಾರ್ಮ್ಯಾಟ್‌ನಲ್ಲಿ ಮಾತ್ರ ಆಡಲಿದ್ದೇನೆ,” ಎಂದು ಸ್ಪಷ್ಟಪಡಿಸಿದರು. ಈ ಮೂಲಕ, ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ ಟೆಸ್ಟ್ ಕಂಬ್ಯಾಕ್ ಸುದ್ದಿಗಳಿಗೆ ಸ್ವತಃ ವಿರಾಟ್ ಕೊಹ್ಲಿಯೇ ತೆರೆ ಎಳೆದಿದ್ದಾರೆ.

ವಿರಾಟ್ ಕೊಹ್ಲಿ ಅವರು 2027ರ ಏಕದಿನ ವಿಶ್ವಕಪ್‌ವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರೆಯಲು ಇಚ್ಛಿಸಿರುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ. 2027ರ ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಏಕಕಾಲಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ, “ಮೊದಲ 20-25 ಓವರ್‌ಗಳು ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿತ್ತು. ಆ ಬಳಿಕ ನಿಧಾನವಾಗಲು ಶುರುವಾಯಿತು. ಪಿಚ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರಿತು ಆಡಿದರೆ ಮಾತ್ರ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯ,” ಎಂದರು. ಫಿಟ್‌ನೆಸ್ ಕುರಿತು ಕೇಳಿದಾಗ, “ಕ್ರಿಕೆಟ್‌ಗೂ ನನ್ನ ಫಿಟ್ನೆಸ್‌ಗೂ ಸಂಬಂಧವಿಲ್ಲ. ನಾನು ಬದುಕುತ್ತಿರುವ ರೀತಿಯೇ ಹಾಗೆ. ಪ್ರತಿದಿನವೂ ದೈಹಿಕವಾಗಿ ತುಂಬಾ ಶ್ರಮಿಸುತ್ತೇನೆ,” ಎಂದು ವಿವರಿಸಿದರು.

error: Content is protected !!