ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯುದ್ದಕ್ಕೂ ಅನೇಕ ಭಯೋತ್ಪಾದಕರ ಲಾಂಚ್ ಪ್ಯಾಡ್‌ಗಳು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ, ಆಧುನಿಕ ಕಣ್ಗಾವಲು ಸಾಧನಗಳನ್ನು ನಿಯೋಜಿಸಿದ್ದು, ಗಡಿಯಾಚೆಯಿಂದ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಲು ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ’ ವೇಳೆ ಬಿಎಸ್‌ಎಫ್ ಮತ್ತು ಸೇನೆಯು ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನದ ಅನೇಕ ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಿದೆ ಎಂದು ಕಾಶ್ಮೀರ ಪ್ರಾಂತ್ಯದ BSF IG ಅಶೋಕ್ ಯಾದವ್ ವರದಿಗಾರರಿಗೆ ತಿಳಿಸಿದರು.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ವೇಳೆ ಲಾಂಚ್ ಪ್ಯಾಡ್‌ಗಳ ನಾಶ ಮತ್ತು ಅವುಗಳ ದುರ್ಬಲತೆ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಕೆಲವು ಲಾಂಚ್ ಪ್ಯಾಡ್‌ಗಳನ್ನು ಮತ್ತಿತರ ಕಡೆಗಳಿಗೆ ಸ್ಥಳಾಂತರಿಸಿದರು. “ಆದರೆ ಇನ್ನೂ ಅನೇಕ ಲಾಂಚ್ ಪ್ಯಾಡ್ ಗಳು ಎಲ್‌ಒಸಿಯಲ್ಲಿ ಸಕ್ರಿಯವಾಗಿವೆ ಎಂದು ಐಜಿ ಹೇಳಿದರು.
ಒಳನುಸುಳುವಿಕೆ ಪ್ರಯತ್ನಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಳಿಗಾಲದ ಲಾಭವನ್ನು ಪಡೆದುಕೊಂಡು ಒಳನುಸುಳುವಿಕೆ ಪ್ರಯತ್ನ ಮಾಡುತ್ತಾರೆ. ಆಧುನಿಕ ಕಣ್ಗಾವಲು ಸಾಧನಗಳನ್ನು ನಿಯೋಜಿಸಿದ್ದೇವೆ ಮತ್ತು ಗಡಿಯುದ್ದಕ್ಕೂ ಅಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ದುರ್ಬಲ ತಾಣಗಳನ್ನು ಬಂದ್ ಮಾಡಿದ್ದೇವೆ ಎಂದು ತಿಳಿಸಿದರು.
ಪಾಕಿಸ್ತಾನವು ಯಾವಾಗಲೂ ಜಮ್ಮು ಮತ್ತು ಕಾಶ್ಮೀರದ ಈ ಭಾಗಕ್ಕೆ ಉಗ್ರರು, ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಪ್ರಯತ್ನಿಸುತ್ತಿದೆ. ಸೇನೆಯೊಂದಿಗೆ ಬಹಳ ಜಾಗರೂಕರಾಗಿದ್ದೇವೆ ಮತ್ತು ಅವರ ಎಲ್ಲಾ ದುಷ್ಟ ಯೋಜನೆಗಳನ್ನು ವಿಫಲಗೊಳಿಸಲಾಗುತ್ತದೆ. ಆಪರೇಷನ್ ಸಿಂಧೂರ ಕೊನೆಗೊಂಡಿಲ್ಲ. ಪಾಕಿಸ್ತಾನದಿಂದ ಯಾವುದೇ ರೀತಿಯ ಕ್ರಮಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಐಜಿ ಯಾದವ್ ಹೇಳಿದರು.

