Monday, December 1, 2025

ಶ್ರೀಲಂಕಾದಲ್ಲಿ ಸಿಲುಕಿದ್ದ 130 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ಐಎಎಫ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಪ್ರಜೆಗಳನ್ನು ಭಾರತೀಯ ವಾಯುಪಡೆ ಸುರಕ್ಷಿತವಾಗಿ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಕರೆತಂದಿದೆ. ಕೊಲಂಬೊದಿಂದ ತಿರುವನಂತಪುರಂಗೆ ಕಾರ್ಯನಿರ್ವಹಿಸುತ್ತಿರುವ ಐಎಎಫ್ ವಿಮಾನಗಳು ಭಾನುವಾರ ಸಂಜೆ 7.30ರ ಹೊತ್ತಿಗೆ ಇಲ್ಲಿ ತಲುಪಿದವು ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ರಕ್ಷಣಾ ಇಲಾಖೆ ವಕ್ತಾರರ ಪ್ರಕಾರ, ದ್ವೀಪ ರಾಷ್ಟ್ರಕ್ಕೆ ರಕ್ಷಣಾ ಸಾಮಗ್ರಿ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ತಲುಪಿಸಲು ಬಳಸಲಾಗುತ್ತಿದ್ದ ಐಎಎಫ್‌ನ ಐಎಲ್-76 ಮತ್ತು ಸಿ-130 ಜೆ ಹೆವಿ ಲಿಫ್ಟ್ ಕ್ಯಾರಿಯರ್‌ಗಳು ಅಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತಂದಿವೆ.

ಶ್ರೀಲಂಕಾದಲ್ಲಿ ಇತ್ತೀಚಿನ ನೈಸರ್ಗಿಕ ವಿಕೋಪಗಳಿಂದ ಉಂಟಾದ ತೀವ್ರ ಮಾನವೀಯ ಪರಿಣಾಮದ ನಂತರ, ಆಪರೇಷನ್ ಸಾಗರ್ ಬಂಧು ಕಾರ್ಯಾಚರಣೆಯ ಭಾಗವಾಗಿ ಐಎಎಫ್ ಶ್ರೀಲಂಕಾದ ಜನರಿಗೆ ನಿರ್ಣಾಯಕ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಬೆಂಬಲ ನೀಡುವುದನ್ನು ಮುಂದುವರೆಸಿದೆ ಎಂದು ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಐಎಎಫ್ ಹೆಲಿಕಾಪ್ಟರ್‌ಗಳು ಒಟ್ಟು 57 ಶ್ರೀಲಂಕಾದ ಸೇನಾ ಸಿಬ್ಬಂದಿಯನ್ನು ದಿಯತಲಾವಾ ಸೇನಾ ಶಿಬಿರ ಮತ್ತು ಕೊಲಂಬೊದಿಂದ ಕೋಟ್ಮಲೆಗೆ ಸಾಗಿಸಿದೆ. ಶ್ರೀಲಂಕಾದ ಮಧ್ಯ ಪ್ರಾಂತ್ಯದ ಕೋಟ್ಮಲೆ ಭೂಕುಸಿತ ಪೀಡಿತ ಪ್ರದೇಶವಾಗಿದ್ದು, ಇಲ್ಲಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಐಎಎಫ್ ಒಂದು ಹೈಬ್ರಿಡ್ ಕಾರ್ಯಾಚರಣೆ ಕೈಗೊಂಡಿದ್ದು, ಇದರಲ್ಲಿ ಗರುಡ ಕಮಾಂಡೋಗಳು ಸಂಕಷ್ಟದಲ್ಲಿರುವ ನಾಗರಿಕರಿದ್ದ ಸ್ಥಳದಲ್ಲಿ ಇಳಿದಿದೆ. ನಂತರ ಮೊದಲೇ ಗುರುತಿಸಲಾದ ಲ್ಯಾಂಡಿಂಗ್ ಸ್ಥಳಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಹೆಲಿಕ್ಯಾಪ್ಟರ್​ ಮೂಲಕ ಕರೆದೊಯ್ಯಲಾಗಿದೆ.

error: Content is protected !!