ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ವಿಶ್ವಾದ್ಯಂತ ಡಿಸೆಂಬರ್ 12 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಸಿನಿಮಾ ದರ್ಶನ್ ಅವರ ಅಭಿಮಾನಿಗಳಿಗೆ ಒಂದು ವಿಶೇಷ ಭಾವನಾತ್ಮಕ ಕ್ಷಣವಾಗಿದೆ. ಕಾರಣ, ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿರುವಾಗಲೇ ಚಿತ್ರ ತೆರೆಗೆ ಬರುತ್ತಿದೆ. ಹೀಗಾಗಿ, ಚಿತ್ರದ ಪ್ರಚಾರದ ಸಂಪೂರ್ಣ ಹೊಣೆ ಈಗ ಅಭಿಮಾನಿಗಳ ಹೆಗಲಿಗೆ ಬಂದಿದೆ.
ಈ ನಡುವೆ, ‘ಡೆವಿಲ್’ ಚಿತ್ರತಂಡ ಬಹುದೊಡ್ಡ ಸುದ್ದಿಯೊಂದನ್ನು ಬಹಿರಂಗಪಡಿಸಿದೆ. ಅದೇ, ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕ! ಈ ಸುದ್ದಿ ತಿಳಿದು ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ ಮತ್ತು ಹಬ್ಬ ಮಾಡಲು ಸಿದ್ಧರಾಗಿದ್ದಾರೆ.
‘ಡೆವಿಲ್’ ಚಿತ್ರದ ಟ್ರೇಲರ್ ಡಿಸೆಂಬರ್ 5, 2025 ರಂದು ಬೆಳಿಗ್ಗೆ ಸರಿಯಾಗಿ 10.05ಕ್ಕೆ ಬಿಡುಗಡೆಯಾಗಲಿದೆ. ಪ್ರಸಿದ್ಧ ‘ಸರಿಗಮ’ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳು ಈ ಟ್ರೇಲರ್ ಅನ್ನು ವೀಕ್ಷಿಸಬಹುದಾಗಿದೆ.
ಟೀಸರ್ ಮೂಲಕ ಈಗಾಗಲೇ ದರ್ಶನ್ ಅವರ ಭಿನ್ನವಾದ ಲುಕ್ ಮತ್ತು ಮೇಕಿಂಗ್‌ನ ಝಲಕ್ ನೋಡಿದ ಫ್ಯಾನ್ಸ್‌ಗೆ, ಟ್ರೇಲರ್ ಬಿಡುಗಡೆಯ ಬಳಿಕ ಕಥೆ, ಮೇಕಿಂಗ್ ಗುಣಮಟ್ಟ ಹಾಗೂ ಇತರೆ ವಿಷಯಗಳ ಕುರಿತು ಒಂದು ಸ್ಪಷ್ಟ ಕಲ್ಪನೆ ಸಿಗಲಿದೆ.
ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರುವ ಮುನ್ನವೇ ಈ ಚಿತ್ರದ ಕೆಲವು ಭಾಗದ ಶೂಟಿಂಗ್ ಮುಗಿದಿತ್ತು. ನಂತರ ಜಾಮೀನಿನ ಮೇಲೆ ಹೊರಬಂದ ಬಳಿಕ, ದೇಶ-ವಿದೇಶಗಳಲ್ಲಿ ಉಳಿದ ಶೂಟಿಂಗ್ ಭಾಗಗಳನ್ನು ಮತ್ತು ಡಬ್ಬಿಂಗ್ ಕೆಲಸವನ್ನು ದರ್ಶನ್ ಅವರು ಪೂರ್ಣಗೊಳಿಸಿದರು. ಈಗ ಅವರು ಜೈಲಿನಲ್ಲಿರುವಾಗಲೇ ಸಿನಿಮಾ ರಿಲೀಸ್ ಆಗುತ್ತಿರುವುದು ವಿಪರ್ಯಾಸ.
ಚಿತ್ರವನ್ನು ನಿರ್ದೇಶಕ ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡಿದ್ದು, ನಟಿ ರಚನಾ ರೈ ಅವರು ದರ್ಶನ್‌ಗೆ ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ನಟಿಸಿದ್ದಾರೆ. ಜೊತೆಗೆ, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
‘ಡೆವಿಲ್’ ಚಿತ್ರವನ್ನು ಡಿಸೆಂಬರ್ 12 ರಂದು ಅದ್ದೂರಿಯಾಗಿ ತೆರೆಗೆ ತರುವ ಪ್ಲಾನ್ ನಡೆಯುತ್ತಿದೆ. ಈ ನಿಟ್ಟಿನಲ್ಲಿ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಅಭಿಮಾನಿಗಳನ್ನು ಕರೆಸಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಚಿತ್ರದ ಪ್ರಚಾರ ಕಾರ್ಯಗಳ ಕುರಿತು ಸೂಕ್ತ ರೂಪುರೇಷೆಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ. ‘ಡೆವಿಲ್’ ಯಶಸ್ಸಿಗೆ ಅಭಿಮಾನಿಗಳ ಶ್ರಮವೇ ಪ್ರಮುಖ ಅಸ್ತ್ರವಾಗಲಿದೆ.

