ಹೊಸದಿಗಂತ ವರದಿ ಬೆಳಗಾವಿ :
ಇತ್ತೀಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇಳೆ ಪಿಹೆಚ್ ಡಿ ಪದವಿ ಪ್ರದಾನ ಮಾಡಿಲ್ಲ ಎಂಬ ಕಾರಣಕ್ಕೆ ಸಂಬಂಧಿಸಿ ಮನನೊಂದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಸುಜಾತಾ ಬೆಂಡಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವವಳು. ಹತ್ತಾರು ಮಾತ್ರೆಗಳನ್ನು ಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಳಾಗಿದ್ದ ವಿದ್ಯಾರ್ಥಿನಿಯನ್ನು ತತಕ್ಷಣ ಸರಕಾರಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಭಾಗ ಪ್ರದೇಶದ ಸಮಗ್ರ ಚಾರಿತ್ರಿಕ ಅಧ್ಯಯನ ವಿಷಯದಲ್ಲಿ ವಿದ್ಯಾರ್ಥಿನಿ ಸಂಶೋಧನೆ ಮಾಡಿ ಆರು ತಿಂಗಳ ಹಿಂದೆಯೇ ಪ್ರಬಂಧ ಸಲ್ಲಿಸಿದ್ದಳು ಎನ್ನಲಾಗಿದೆ. ಈ ಬಾರಿಯ ವಿವಿಯ ಘಟಿಕೋತ್ಸವದ ವೇಳೆ ಪಿಎಚ್ ಡಿ ಪ್ರದಾನ ಮಾಡುವ ನಿರೀಕ್ಷೆ ಎಲ್ಲರಿಗೆ ಇತ್ತು. ಆದರೆ ವಿದ್ಯಾರ್ಥಿನಿಗೆ ಇತ್ತೀಚೆಗೆ ನಡೆದ ವಿವಿ ಘಟಿಕೋತ್ಸವದಲ್ಲಿ ಪಿಎಚ್ ಡಿ ಪ್ರದಾನ ಮಾಡಿರಲಿಲ್ಲ. ಅನಗತ್ಯವಾಗಿ ಟಾರ್ಗೆಟ್ ಮಾಡಿ ಪಿಎಚ್ ಡಿ ನೀಡಲು ವಿವಿ ಕುಲಪತಿ ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೈಡ್ ಆಗಿರುವ ಡಾ. ಮೂರ್ತಿ ಎಂಬುವವರ ಕಿರುಕುಳದ ಬಗ್ಗೆ ವಿಸಿ ಹಾಗೂ ಕುಲಸಚಿವರಿಗೆ ವಿದ್ಯಾರ್ಥಿನಿ ದೂರು ಸಹ ನೀಡಿದ್ದಳು. ದೂರಿನ ಬಳಿಕ ಸಮಸ್ಯೆ ಬಗೆಹರಿದಿತ್ತು ಎನ್ನಲಾಗಿದ್ದು, ಈಗ ವಿವಿ ಕುಲಪತಿ ಸಿ.ಎಂ.ತ್ಯಾಗರಾಜ್ ಅವರೇ ಪಿಎಚ್ ಡಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ವಿವಿ ಘಟಿಕೋತ್ಸವದಲ್ಲಿ ಪದವಿ ನೀಡಿರಲಿಲ್ಲ. ಇದರಿಂದ ತೀವ್ರವಾಗಿ ಮನನೊಂದ ಸುಜಾತಾ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದ್ದು, ಕುಲಪತಿ ವಿರುದ್ಧ ದೂರು ದಾಖಲಿಸುವ ಮಾಹಿತಿ ಲಭ್ಯವಾಗಿದೆ.

