ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಒಂದೇ ದಿನ ಎರಡು ದೇವಸ್ಥಾನಗಳಲ್ಲಿ ನಡೆದ ಕಳ್ಳತನ ಯತ್ನ ಮತ್ತು ಕೃತ್ಯಗಳು ಇದಕ್ಕೆ ಸಾಕ್ಷಿಯಾಗಿದೆ.
ತಿಪಟೂರು ನಗರದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕಳ್ಳನೋರ್ವ ಹುಂಡಿ ಕದಿಯುವ ಯತ್ನದಲ್ಲಿ ಸ್ಥಳೀಯರಿಗೆ ಸಿಕ್ಕಿಬಿದ್ದಿದ್ದಾನೆ. ಕಳ್ಳತನಕ್ಕೂ ಮುನ್ನ ದುಷ್ಕರ್ಮಿ ದೇವಸ್ಥಾನದ ವ್ಯವಸ್ಥಾಪಕನ ಮನೆಗೆ ಚಿಲಕ ಹಾಕಿ, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸಿ ದೇವಸ್ಥಾನದ ಒಳಗೆ ನುಗ್ಗಿದ್ದ.
ಆದರೆ, ವ್ಯವಸ್ಥಾಪಕರಿಗೆ ಅನುಮಾನ ಬಂದ ಕಾರಣ ಅವರು ತಕ್ಷಣ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾದಾಗ, ಕಳ್ಳನ ಕೈಚಳಕ ಬಯಲಾಗಿದೆ. ತಕ್ಷಣ ಸ್ಥಳೀಯರು ಸೇರಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳತನ ಮಾಡಿದ ಎರಡು ಚಿನ್ನದ ತಾಳಿ, ರಾಡು, ಚಾಕು ಮತ್ತು ಸ್ಕ್ರೂ ಡ್ರೈವರ್ ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದೇ ರೀತಿ ಮತ್ತೊಂದು ಕಳ್ಳತನದ ಕೃತ್ಯ ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ. ಅಪರಿಚಿತ ಕಳ್ಳರು ದೇವಸ್ಥಾನದ ಹುಂಡಿಯನ್ನೇ ಕದ್ದು ಹೊತ್ತೊಯ್ದಿದ್ದಾರೆ.
ಕಳ್ಳರ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ದಾಖಲಾಗಿದೆ. ಮಾಸ್ಕ್ ಧರಿಸಿದ ಕಳ್ಳರು ರಾಡ್ ಹಿಡಿದು ದೇವಾಲಯ ಪ್ರವೇಶಿಸಿ, ಬಲವಂತವಾಗಿ ಹುಂಡಿಯನ್ನು ಮುರಿದು ಕದ್ದುಕೊಂಡು ಹೋಗಿದ್ದಾರೆ.
ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

