ಹೊಸದಿಗಂತ ಡಿಜಿಟಲ್ ಡೆಸ್ಕ್
ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಭಾರೀ ಬಹುಮತದೊಂದಿಗೆ ಸತತ 7 ನೇ ಬಾರಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ.ಕಾಂಗ್ರೆಸ್ ಬಲ ಕಳೆದ ಬಾರಿಗಿಂತ ಅರ್ಧಕ್ಕೆ ಕುಸಿಯಲಿದ್ದರೆ, ಭಾರೀ ಸುದ್ದಿ ಮಾಡಿರುವ ಆಪ್ಗೆ ಒಂದಂಕೆಯ ಸ್ಥಾನವಷ್ಟೇ ಲಭಿಸಲಿದೆ ಎನ್ನಲಾಗಿದೆ.
ಡಿ.1 ಮತ್ತು 5 ರಂದು ನಡೆದ ಚುನಾವಣೆಯ ಮತ ಎಣಿಕೆ ಡಿ.8ರಂದು ನಡೆಯಲಿದೆ.
ಗುಜರಾತಿನಲ್ಲಿ ಬಿಜೆಪಿಗೆ 182 ಸ್ಥಾನಗಳ ಪೈಕಿ 125-130 ಸ್ಥಾನಗಳು (2017 ರ ಚುನಾವಣೆಯಲ್ಲಿ ಬಿಜೆಪಿಗೆ 99ಸ್ಥಾನಗಳು ಲಭಿಸಿದ್ದವು)ಬರಲಿವೆ ಎಂಬುದಾಗಿ ಟಿವಿ 9 ಮತದಾನೋತ್ತರ ಸಮೀಕ್ಷೆಯಲ್ಲಿ ಹೇಳಲಾಗಿದ್ದರೆ, ಕಾಂಗ್ರೆಸಿಗೆ 40-50 ಸ್ಥಾನಗಳು ಲಭಿಸಿ ಕಳೆದ ಬಾರಿ ಗಳಿಸಿದ ಸ್ಥಾನಗಳಿಗಿಂತ ಅರ್ಧಕ್ಕರ್ಧ ಸ್ಥಾನಗಳನ್ನು ಅದು ಕಳೆದುಕೊಳ್ಳಲಿದೆ ಎಂದು ಹೇಳಲಾಗಿದೆ.ಹಾಗೆಯೇ ಭಾರೀ ಸದ್ದು ಮಾಡಿರುವ ಆಪ್ಗೆ 4-10 ಸ್ಥಾನಗಳು ಲಭಿಸಬಹುದು, ಇತರರಿಗೆ 5 ಸ್ಥಾನಗಳು ಬರಬಹುದು ಎನ್ನಲಾಗಿದೆ.
ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 138 ಸ್ಥಾನಗಳು ಲಭಿಸಲಿದ್ದು, ಕಾಂಗ್ರೆಸಿಗೆ 36 ಮತ್ತು ಆಪ್ಗೆ 2 ಸ್ಥಾನಗಳು ಲಭಿಸಲಿವೆ .ಜನ್ ಕೀ ಬಾತ್ ಸಮೀಕ್ಷೆಯಲ್ಲಿ ಬಿಜೆಪಿಗೆ 129 ಸ್ಥಾನಗಳು , ಕಾಂಗ್ರೆಸಿಗೆ 43, ಆಪ್ಗೆ 10 ಸ್ಥಾನಗಳು ಲಭಿಸಬಹುದು . ನ್ಯೂಸ್ಎಕ್ಸ್ ಪ್ರಕಾರ, ಬಿಜೆಪಿಗೆ 117-140 ಸ್ಥಾನಗಳು ಬಂದರೆ, ಕಾಂಗ್ರೆಸಿಗೆ 34-51 ಸ್ಥಾನಗಳು ಲಭಿಸಲಿವೆ.ಝೀ ನ್ಯೂಸ್ ಹೇಳಿರುವಂತೆ, ಬಿಜೆಪಿಗೆ 110-125ಸ್ಥಾನಗಳು, ಕಾಂಗ್ರೆಸಿಗೆ 45-60, ಆಪ್ಗೆ 1-5, ಇತರರಿಗೆ 0-4ಸ್ಥಾನಗಳು ಲಭಿಸಬಹುದು ಎನ್ನಲಾಗಿದೆ.ಹಾಗೆಯೇ , ಬಿಜೆಪಿಗೆ 131 ಸ್ಥಾನಗಳು , ಕಾಂಗ್ರೆಸಿಗೆ 41 ಸ್ಥಾನ ಮತ್ತು ಆಪ್ಗೆ 6, ಇತರರಿಗೆ 4 ಸ್ಥಾನಗಳು ಲಭಿಸಬಹುದು ಎಂದು ಟೈಮ್ಸ್ ನೌ ಹೇಳಿದೆ.
ಹಿ.ಪ್ರ.ದಲ್ಲಿ ಬಿಜೆಪಿ 2 ನೇ ಬಾರಿಗೆ ಅಧಿಕಾರಕ್ಕೆ
ಹಿಮಾಚಲ ಪ್ರದೇಶದಲ್ಲಿ 68 ಸ್ಥಾನಗಳ ಪೈಕಿ ಬಿಜೆಪಿಗೆ 35 -40 ಸ್ಥಾನಗಳು ಲಭಿಸಲಿದೆ. ಕಾಂಗ್ರೆಸಿಗೆ 2-25, ಆಪ್ಗೆ 0-3, ಇತರರಿಗೆ 1-5 ಸ್ಥಾನಗಳು ಲಭಿಸಬಹುದು ಎಂದು ಬಾರ್ಕ್ ಸಮೀಕ್ಷೆ ಹೇಳಿದೆ. ಆದರೆ ಇಂಡಿಯಾ ಟುಡೇ ಪ್ರಕಾರ, ಬಿಜೆಪಿಗೆ 24-34ಸ್ಥಾನಗಳು ಲಭಿಸಲಿದ್ದು, ಕಾಂಗ್ರೆಸಿಗೆ 30-40ಸ್ಥಾನಗಳು ಲಭಿಸಬಹುದು ಎನ್ನಲಾಗಿದೆ.ನ್ಯೂಸ್ಎಕ್ಸ್ ಹೇಳುವಂತೆ, ಬಿಜೆಪಿ 32-40 ಸ್ಥಾನಗಳೊಂದಿಗೆ, ಎರಡನೇ ಬಾರಿಯೂ ಅಧಿಕಾರಕ್ಕೆ ಬರಲಿದೆ.ಕಾಂಗ್ರೆಸ್ 27-34ಸ್ಥಾನಗಳನ್ನು ಪಡೆಯಲಿದೆ.ಆಪ್ಗೆ ಶೂನ್ಯ ಸ್ಥಾನ ಎಂದಿದೆ.
ಟೈಮ್ಸ್ ನೌ ಮತದಾನೋತ್ತರ ಸಮೀಕ್ಷೆಯಲ್ಲಿ, ಬಿಜೆಪಿಗೆ 38 ಸ್ಥಾನಗಳು ಲಭಿಸಿ ತೃಪ್ತಿಕರ ಬಹುಮತ ಒದಗಲಿದೆ ಮತ್ತು ಕಾಂಗ್ರೆಸಿಗೆ 28 ಸ್ಥಾನಗಳು ಲಭಿಸಲಿವೆ ಎನ್ನಲಾಗಿದೆ.ಬಿಜೆಪಿಯ ಮತಗಳಿಕೆ ಪ್ರಮಾಣವೂ ಹೆಚ್ಚಲಿದೆ ಎಂದು ಅದು ಹೇಳಿದೆ.
ಇಟಿಜಿ ಸಮೀಕ್ಷೆಯಲ್ಲಿ, ಬಿಜೆಪಿಗೆ 38 ಸ್ಥಾನಗಳು ಲಭಿಸಿದರೆ, ಕಾಂಗ್ರೆಸಿಗೆ 28 ಸ್ಥಾನಗಳು ಲಭಿಸಲಿವೆ. ಆಪ್ಗೆ ಯಾವುದೇ ಸ್ಥಾನ ಲಭಿಸದು.