ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 31 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಸೌಭಾಗ್ಯ ಎಂದು ಗುರುತಿಸಲಾಗಿದ್ದು, ಇವರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾರೆ.
ಕೈವಾರದ ಮೂಲ ನಿವಾಸಿಯಾದ ಸೌಭಾಗ್ಯ ಅವರು ತೋಟದಗುಡ್ಡದಹಳ್ಳಿಯ ಸಾಯಿ ರಾಮ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರು ಎರಡು ವರ್ಷಗಳ ಹಿಂದೆ ತಮ್ಮ ಗಂಡನನ್ನು ಕಳೆದುಕೊಂಡಿದ್ದರು. ಪತಿಯ ಅಗಲಿಕೆಯ ದುಃಖದಿಂದ ಅವರು ತೀವ್ರವಾದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೀವನ ನಿರ್ವಹಣೆಗಾಗಿ ಅವರು ದೇವಸ್ಥಾನವೊಂದರಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದರು.
ಖಿನ್ನತೆ ಮತ್ತು ನೋವನ್ನು ತಾಳಲಾರದೆ, ಸೌಭಾಗ್ಯ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಡೆತ್ ನೋಟ್ ಒಂದನ್ನು ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ತಾಯಿಯ ಈ ನಿರ್ಧಾರದಿಂದ ಇಬ್ಬರು ಮಕ್ಕಳು ಆಸರೆಯಿಲ್ಲದೆ ಕಂಗಾಲಾಗಿದ್ದಾರೆ.

