ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರಿನ ಹೊಸಕೋಟೆಯ ನಂದಗುಡಿ ಸಮೀಪದ ಬೀಮಕನಹಳ್ಳಿ ಗ್ರಾಮದಲ್ಲಿ ಶನಿವಾರ ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವವೊಂದು ಪಾಳು ಕ್ವಾರಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿತ್ತು. ಆ ಬಳಿಕ ಘಟನೆಯ ತನಿಖೆಗೆ ಇಳಿದ ಪೊಲೀಸರು ಒಂದೊಂದೇ ಸಾಕ್ಷ್ಯಧಾರ ಕಲೆಹಾಕಿ ಪ್ರಕರಣವನ್ನು ಬೇಧಿಸಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ 1 ಲಕ್ಷ ರೂ. ಸುಪಾರಿ ಕೊಟ್ಟು ಕೊಲ್ಲಿಸಿದ್ದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಮೃತನನ್ನು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಸಮೀಪದ ಚಂಬೆ ಗ್ರಾಮದ ನಿವಾಸಿ ಆನಂದ ಅಲಿಯಾಸ್ ಅನಿಲ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಭಧಿಸಿದಂತೆ ಆತಮ ಪತ್ನಿ ಚೈತ್ರಾ (28), ಆಕೆಯ ಪ್ರಿಯಕರ ಚಲಪತಿ (35) ಮತ್ತು ಸುಪಾರಿ ಕಿಲ್ಲರ್ ಪೃಥ್ವಿರಾಜ್ (26) ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಹಂತಕ ನವೀನ್ ನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಬೀಮಕನಹಳ್ಳಿಯ ಗ್ರಾಮಸ್ಥರೊಬ್ಬರು ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ಕ್ವಾರಿಯಲ್ಲಿ ಶವವನ್ನು ಕಂಡು ನಂದಗುಡಿ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಾಚರಣೆಗಿಳಿದ ವೃತ್ತ ನಿರೀಕ್ಷಕ ರಂಗಸ್ವಾಮಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದೆ.
ಲಾರಿ ಚಾಲಕ ಆನಂದ ಮತ್ತು ಚೈತ್ರಾ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಚೈತ್ರಾ ನೆರೆಮನೆಯ ಚಲಪತಿ ಎಂಬಾತನಿಗೆ ಆಕರ್ಷಿತಳಾಗಿ ಅಕ್ರಮ ಸಂಭಧ ಹೊಂದಿದ್ದಳು. ಪತ್ನಿಗೆ ಅಕ್ರಮ ಸಂಬಂಧ ಆನಂದನ ಗಮನಕ್ಕೂ ಬಂದು ಹಲವು ಬಾರಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.
ನಾಲ್ಕು ತಿಂಗಳ ಹಿಂದೆ ಚಲಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಚೈತ್ರಾ ಮಾಸ್ತಿ ಪೊಲೀಸರಿಗೆ ಕಿರುಕುಳ ದೂರು ನೀಡಿದ್ದಳು. ಮಾಸ್ತಿ ಪೊಲೀಸರು ಚಲಪತಿ ಅವರನ್ನು ಕರೆಸಿ ಎಚ್ಚರಿಕೆಐನ್ನೂ ನೀಡಿದರು. ಆ ಬಳಿಕ ಚೈತ್ರಾಳ ಕೋಪ ತಣ್ಣಗಾಗಿದ್ದು, ಕಳೆದೆರಡು ತಿಂಗಳಲ್ಲಿ ಮತ್ತೆ ಇಬ್ಬರೂ ಆತ್ಮೀಯರಾಗಿದ್ದರು.
ಇದರಿಂದ ಕೋಪಗೊಂಡ ಆನಂದ ಕುಡಿದು ಮನೆಗೆ ಬರಲು ಪ್ರಾರಂಭಿಸಿ ತನ್ನ ಹೆಂಡತಿಯನ್ನು ನಿಂದಿಸಿದ್ದಾನೆ. ಆತನ ಕಿರುಕುಳದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಲು ಆನಂದನನ್ನೇ ಕೊನೆಗಾಣಿಸಲು ಚೈತ್ರ ನಿರ್ಧರಿಸಿದ್ದಾಳೆ. ಇದಕ್ಕಾಗಿ ಆಕೆ ಮತ್ತು ಚಲಪತಿ ಯೋಜನೆಯೊಂದನ್ನು ರೂಪಿಸಿದ್ದಾರೆ.
ಚೈತ್ರಾ ತನ್ನ ಸಹೋದರನ ಸ್ನೇಹಿತ ಪೃಥ್ವಿರಾಜ್‌ನನ್ನು ಸಂಪರ್ಕಿಸಿ ಆನಂದನನ್ನು ಕೊಲ್ಲಲು 1 ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಾಳೆ. ಜೊತೆಗೆ ಆಕೆ ಆತನಿಗೆ ಮುಂಗಡವಾಗಿ 5,000 ರೂಪಾಯಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಸಂಬಂಧ ಅನುಮಾನಗೊಂಡ ಪೊಲೀಸರು ಚೈತ್ರಾಳನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಕೊಲೆ ಸಂಚು ಬಯಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ