ಹೊಸ ದಿಗಂತ ವರದಿ, ಅಂಕೋಲಾ:
ಜಿಲ್ಲೆಯ ಇಬ್ಬಾಗದ ಕುರಿತು ಜಿಲ್ಲೆಯ ಬುದ್ಧಿ ಜೀವಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಅಂಕೋಲಾದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರಸಿ ಪ್ರತ್ಯೇಕ ಜಿಲ್ಲೆ ಆಗಬೇಕು ಎಂದು ತಾವು ಎಲ್ಲಿಯೂ ಪ್ರತಿಪಾದಿಸಿಲ್ಲ ಆದರೆ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಬದಲಾವಣೆ ಬೇಡ ಎಂದು ಹೇಳಲೂ ಬರುವುದಿಲ್ಲ ಇದು ಪದೇ ಪದೇ ಬದಲಾವಣೆ ಮಾಡುವ ವಿಷಯವೂ ಅಲ್ಲ ಆದ್ದರಿಂದ ಜಿಲ್ಲೆಯ ಚಿಂತಕರ ಅಭಿಪ್ರಾಯ ಸಂಗ್ರಹಿಸಿ ಆ ದಿಶೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ರಾಜಕೀಯ ಬದಲಾವಣೆಯಲ್ಲಿ ಪಕ್ಷಕ್ಕೆ ಬಂದ ಹಿರಿಯ ನಾಯಕ ವಿಶ್ವನಾಥ್ ಅವರು ಪಕ್ಷ ಬಿಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಬ್ಬಾರ್ ಪಕ್ಷ ಸೇರಲು ಮತ್ತು ಹೊರಗೆ ಹೋಗಲು ಯಾರ ಮುಂದಾಳತ್ವ ವಹಿಸಿಲ್ಲ ವಿಶ್ವನಾಥ ಅವರು ಹಿರಿಯ ನಾಯಕರಾಗಿದ್ದು ಪಕ್ಷದ ಮುಖಂಡರೊಂದಿಗೆ ಅವರ ಜೊತೆ ಚರ್ಚಿಸುವ ಕೆಲಸ ನಡೆಸುವುದಾಗಿ ತಿಳಿಸಿದರು.
ಗುಜರಾತ್ ಮಾದರಿಯಲ್ಲಿ ಈ ಬಾರಿ ಟಿಕೆಟ್ ಹಂಚಿಕೆ ಮಾಡಲಾಗುವುದೇ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯಲ್ಲಿ ಹೈಕಮಾಂಡ್ ಎಲ್ಲಾ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.