Tuesday, December 2, 2025

ಟೀಮ್ ಇಂಡಿಯಾದಲ್ಲಿ ಆಂತರಿಕ ಕಲಹ? ಕೊಹ್ಲಿ-ಶರ್ಮಾ ಜತೆ ‘ಗಂಭೀರ’ ವೈಮನಸ್ಸು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ವಲಯದಲ್ಲಿ ಕುತೂಹಲ ಮೂಡಿಸಿರುವ ಮತ್ತೊಂದು ಮಹತ್ವದ ಬೆಳವಣಿಗೆ ಬೆಳಕಿಗೆ ಬಂದಿದೆ. ಟೀಮ್ ಇಂಡಿಯಾ ಒಳಗೇ ಎಲ್ಲವೂ ಸರಾಗವಾಗಿ ಸಾಗುತ್ತಿಲ್ಲ ಎಂಬ ಮಾತುಗಳು ಜೋರಾಗುತ್ತಿರುವ ನಡುವೆಯೇ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿರುವ ಸಾಧ್ಯತೆ ಕುರಿತು ವರದಿಗಳು ಹರಿದಾಡುತ್ತಿವೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ರಾಯ್‌ಪುರದಲ್ಲಿ ತುರ್ತು ಸಭೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

ಈ ವಿಶೇಷ ಸಭೆಯಲ್ಲಿ ಮುಖ್ಯ ಕೋಚ್ ಗಂಭೀರ್ ಜೊತೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ರಾಯ್‌ಪುರದಲ್ಲೇ ನಡೆಯಲಿರುವ ಎರಡನೇ ಏಕದಿನ ಪಂದ್ಯದ ಹಿನ್ನೆಲೆಯಲ್ಲಿ ಕೊಹ್ಲಿ ಹಾಗೂ ರೋಹಿತ್‌ರನ್ನು ಕೂಡ ಸಭೆಗೆ ಆಹ್ವಾನಿಸುವ ಸಾಧ್ಯತೆ ಇರುವುದಾಗಿ ಮೂಲಗಳು ಸೂಚಿಸಿವೆ.

ಗಂಭೀರ್ ಕೋಚ್ ಆಗಿ ನೇಮಕವಾದ ನಂತರ ತಂಡದ ತಂತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ಭಾಗವಾಗಿಯೇ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಬೇರೆ ಬೇರೆ ಲೆಕ್ಕಾಚಾರಗಳು ನಡೆದಿವೆ ಎಂಬ ಚರ್ಚೆ ಕ್ರೀಡಾಭಿಮಾನಿಗಳ ವಲಯದಲ್ಲಿ ಜೋರಾಗಿದೆ.

ಕೆಲವರು ಟೆಸ್ಟ್ ಮತ್ತು ಏಕದಿನ ತಂಡಗಳ ಪುನರ್‌ರಚನೆ ಕುರಿತು ಗಂಭೀರ್ ವಿಭಿನ್ನ ನಿಲುವು ತಳೆದಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕೊಹ್ಲಿ ಹಾಗೂ ರೋಹಿತ್ ತಮ್ಮ ಆಟದ ಮೂಲಕ ಇನ್ನೂ ತಂಡಕ್ಕೆ ಅವಶ್ಯಕ ಎಂಬುದನ್ನು ಸಾಬೀತು ಮಾಡುತ್ತಲೇ ಇದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ನಡೆಯಲಿರುವ ಬಿಸಿಸಿಐ ಸಭೆ, ಟೀಮ್ ಇಂಡಿಯಾದ ಮುಂದಿನ ದಿಕ್ಕನ್ನು ನಿರ್ಧರಿಸುವ ಮಹತ್ವದ ತಿರುವಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

error: Content is protected !!