ಹೊಸದಿಗಂತ ವರದಿ ವಿಜಯಪುರ:
ಮಠದ ದಾಖಲೆ ಬಿಡುಗಡೆಗೊಳಿಸುವವರು ಬಿಡುಗಡೆಗೊಳಿಸಲಿ ಎಂದು ಶಾಸಕ ಯತ್ನಾಳ್‌ಗೆ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಸವಾಲ್ ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮತ್ತು ಕನಕದಾಸ ಪೀಠಕ್ಕೆ ತಲಾ ಹತ್ತು ಕೋಟಿ ರೂಪಾಯಿ ಅನುದಾನ ಸರ್ಕಾರ ಮಂಜೂರಿಸಿತ್ತು. ಆಗಿನ್ನೂ ಪಂಚಮಸಾಲಿ ಸಮಾಜದ ಪಾದಯಾತ್ರೆ ನಡೆದಿರಲಿಲ್ಲ. ಅದಕ್ಕೂ ಮೊದಲೇ ಮಠ ಅಭಿವೃದ್ಧಿಗೆ, ವಿದ್ಯಾರ್ಥಿ ನಿಲಯಕ್ಕೆ ಅನುದಾನ ನೀಡಿದ್ದಾರೆ. ಅಲ್ಲದೇ, ಇದೆಲ್ಲ ಪಾರದರ್ಶಕವಾಗಿದೆ. ಬೇಕಾದರೆ ಆರ್ ಟಿಐ ಅಡಿ ಮಾಹಿತಿ ಪಡೆಯಬಹುದು ಎಂದರು.
ಬೇಕಾದರೆ ಅವರು ದಾಖಲೆ ಬಿಡುಗಡೆಗೊಳಿಸಲಿ. ವಸಂತ ಕಾಲ ಬಂದಾಗಲೇ ಕಾಗೆ ಯಾವುದು ಕೋಗಿಲೆ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದರು. ಪಂಚಮಸಾಲಿ ಸಮಾಜದ ಮೂರನೇ ಪೀಠದ ಜಗದ್ಗುರು ಮಹಾದೇವ ಶಿವಾಚಾರ್ಯ, ಧರಿದೇವರು, ಮುಖಂಡ ಸುರೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.