ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡೌಸ್ ಚಂಡಮಾರುತದ ಪರಿಣಾಮ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಮೇಲೆ ಹೆಚ್ಚು ಪ್ರಭಾವ ಬೀರಿದೆ. ತರಕಾರಿಗಳ ಬೆಲೆ ಕುಸಿಯುತ್ತಿರುವಾಗ ಸಾರಿಗೆ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೂರು ದಿನಗಳಿಂದ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು, ಸಾರಿಗೆ ಸ್ಥಗಿತಗೊಂಡಿದೆ. ರೈಲುಗಳನ್ನು ರದ್ದುಗೊಳಿಸಿದ್ದರಿಂದ ಬಹುತೇಕ ಜನರು ಮನೆಗಳಿಗೆ ಸೀಮಿತವಾಗಿದ್ದಾರೆ.
ಆಟೋ ಮತ್ತು ಕ್ಯಾಬ್ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೊದಲಿಗಿಂತ 100-150 ಹೆಚ್ಚು ಪಾವತಿಸಬೇಕಾಗಿದೆ ಅಂತಿದಾರೆ ಪ್ರಯಾಣಿಕರು. ಇದಕ್ಕೆ ಕ್ಯಾಬ್ ಮತ್ತು ಆಟೋ ಚಾಲಕರು ತಮ್ಮ ಕಾರಣಗಳನ್ನು ನೀಡುತ್ತಾರೆ. ಮಳೆನೀರಿನಲ್ಲಿ ವಾಹನಗಳನ್ನು ಓಡಿಸುವುದು ಕಷ್ಟ, ಇಂಜಿನ್ಗೆ ನೀರು ನುಗ್ಗಿದರೆ ವಾಹನಗಳು ಹಾಳಾಗುವ ಸಾಧ್ಯತೆ ಇದೆ, ಅದಕ್ಕಾಗಿಯೇ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ರೈಲುಗಳು ರದ್ದಾಗಿದ್ದು, ಬಸ್ಗಳು ಸರಿಯಾಗಿ ಸಂಚರಿಸದ ಕಾರಣ ಚಾಲಕರು ಕೇಳಿದಷ್ಟು ಕೊಡದೆ ಪ್ರಯಾಣಿಕರಿಗೆ ಬೇರೆ ದಾರಿಯಿಲ್ಲದಂತಾಘಿದೆ. ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದು, ಹಲವು ವಾಹನಗಳಿಗೆ ಹಾನಿಯಾಗಿದೆ. ಚಂಡಮಾರುತದ ಪ್ರಭಾವದಿಂದ ತರಕಾರಿ, ಮಾಂಸ ಖರೀದಿಸಲು ಯಾರೂ ಬರುವುದಿಲ್ಲ. ಸರಕು ಹಾಗೆಯೇ ಉಳಿದಿದೆ ಇದರಿಂದ ತರಕಾರಿ, ಮಾಂಸದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ವಸ್ತುಗಳು ವ್ಯರ್ಥವಾಗುತ್ತಿವೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.