ಸ್ಫೋಟಕ ಆರಂಭಿನಾಗಿ ಇಶಾನ್‌ ಕಿಶನ್‌ ಉದಯದಿಂದ ಧವನ್‌ ಸ್ಥಾನಕ್ಕೆ ಕುತ್ತು? ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ ಬಿಸಿಸಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾ ಪ್ರವಾಸದಲ್ಲಿ ಸಿಕ್ಕ ಏಕೈಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡು ಸ್ಫೋಟಕ ದ್ವಿಶತಕ ಸಿಡಿಸಿರುವ ಇಶಾನ್‌ ಕಿಶಾನ್‌ ದಿನಬೆಳಗಾಗುವಷ್ಟರಲ್ಲಿ ಟೀಂ ಇಂಡಿಯಾದ ನವತಾರೆಯಾಗಿ ಹೊರಹೊಮ್ಮಿದ್ದಾರೆ. ಏಡಗೈ ದಾಂಡಿಗರೂ ಆಗಿರುವ ಕಿಶನ್‌ ಉದಯ ಇದೀಗ ಟೀಂ ಇಂಡಿಯಾ ಖಾಯಂ ಆರಂಭಿಕ ಆಟಗಾರ ಶಿಖರ್‌ ಧವನ್‌ ಸ್ಥಾನಕ್ಕೆ ಕುತ್ತು ತರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ನಿಂತ ನೀರಾಗಿರುವ ಟೀಂ ಇಂಡಿಯಾದಲ್ಲಿ ಹೊಸ ಬದಲಾವಣೆಗಳಿಗೆ ಬಿಸಿಸಿಐ ಮುಂದಾಗಿದೆ. ಭಾರತದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್‌ ಗೆ ಒಂದು ವರ್ಷಕ್ಕಿಂತ ಕಡಿಮೆ ಕಾಲಾವಧಿ ಇದ್ದು, ಕಳಪೆ ಪಾರ್ಮ್‌ನಲ್ಲಿರುವ ಧವನ್‌ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಹುಡುಕುತ್ತಿದ್ದ ಬಿಸಿಸಿಐಗೆ ಕಿಶನ್‌ ಆಶಾಕಿರಣದಂತೆ ತೋರಿದ್ದಾರೆ.
ಇಶಾನ್ ಕಿಶನ್ ತನ್ನ ಅದ್ಭುತ ದ್ವಿಶತಕದೊಂದಿಗೆ ಪ್ರಬಲ ಆಯ್ಕೆಯಾಗಿ ಹೊರಹೊಮ್ಮಿದ ಬಳಿಕ ಧವನ್ ವಿಚಾರದಲ್ಲಿ ಬಿಸಿಸಿಐ ಕಠಿಣ ನಿಲುವು ಕೈಗೊಂಡರೆ ಆಶ್ಚರ್ಯವೇನಿಲ್ಲ ಎನ್ನುತ್ತವೆ ಬಿಸಿಸಿಐ ಮೂಲಗಳು. ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಏಕದಿನ ಭವಿಷ್ಯದ ಬಗ್ಗೆ ಹೊಸ ಆಯ್ಕೆ ಸಮಿತಿ ರಚನೆಯಾದ ತಕ್ಷಣ ಚರ್ಚಿಸುವ ಸಾಧ್ಯತೆಯಿದೆ. 38 ರ ಹರೆಯದ ಧವನ್ ತಮ್ಮ ಕೊನೆಯ ಒಂಬತ್ತು ಏಕದಿನ ಪಂದ್ಯಗಳಲ್ಲಿ ಎಂಟರಲ್ಲಿ ಅತ್ಯಂತ ಕೆಟ್ಟ ಆಟವಾಡಿದ್ದಾರೆ. ಅಲ್ಲದೆ, ಪವರ್‌ಪ್ಲೇ ಓವರ್‌ ಗಳಲ್ಲಿ ಹಳೆಯ ವಿಧಾನದೊಂದಿಗೆ ತೀರಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ತಂಡಕ್ಕೆ ಸಾಕಷ್ಟು ಪಂದ್ಯಗಳಲ್ಲಿ ಮುಳುವಾಗಿ ಪರಿಣಮಿಸಿದೆ. T20 ಮಾದರಿಯಲ್ಲಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ಶುಭಮನ್ ಗಿಲ್‌ ಹಾಗೂ ಕಿಶನ್ ಧವನ್‌ ಸ್ಥಾನಕ್ಕೆ ಪ್ರಬಲ ಪೈಪೋಟಿ ಒಡ್ಡಿದ್ದಾರೆ.
ಬಿಸಿಸಿಐ ಸಧ್ಯದಲ್ಲೇ ತಂಡದ ಪ್ರದರ್ಶನದ ಪರಿಶೀಲನಾ ಸಭೆಯನ್ನು ನಡೆಸಲಿದೆ. ಮುಂದಿನ ಹಾದಿಯಲ್ಲಿ ಆಗಬೇಕಾದ ಬದಲಾವಣೆಗಳ ಕುರಿತಾಗಿ ಮುಖ್ಯ ಕೋಚ್ ದ್ರಾವಿಡ್ ಮತ್ತು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಮಾರ್ಗಸೂಚಿಯನ್ನು ಚರ್ಚಿಸಲಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ ಬಳಿಕ ನಿರ್ಧರಿಸದಂತೆ, ಮುಂದಿನ ವರ್ಷದಿಂದ ಹಿರಿಯ ಆಟಗಾರರನ್ನು ಹಂತ ಹಂತವಾಗಿ ಹೊರಹಾಕುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಮೂಲವೊಂದು ದೃಢಪಡಿಸಿದೆ.
“ಹೊಸ ಆಯ್ಕೆ ಸಮಿತಿಯನ್ನು ನೇಮಿಸಿದ ನಂತರ ಶಿಖರ್ ಅವರ ಭವಿಷ್ಯದ ಬಗ್ಗೆ ಕರೆಯನ್ನು ತೆಗೆದುಕೊಳ್ಳಲಾಗುವುದು. ಆದರೆ ಇಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು” ಎಂದು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಬಿಸಿಸಿಐ ಹಿರಿಯ ಮೂಲವೊಂದು ಹೇಳಿದೆ.
ಧವನ್‌ರ ಪ್ರಾಥಮಿಕ ಸಮಸ್ಯೆ ಎಂದರೆ ಅವರ ಸ್ರ್ಟೈಕ್‌ ರೇಟ್ 2019 ರ ವಿಶ್ವಕಪ್‌ ಬಳಿಕ 100 ರಿಂದ ನೀರಸ 75 ಕ್ಕೆ ತೀವ್ರ ಕುಸಿತವಾಗಿದೆ. ಇಶಾನ್ ಕಿಶನ್ ಅವರ ದ್ವಿಶತಕದ ಬಳಿಕ ಆರಂಭಿಕನ ಹುದ್ದೆಯಲ್ಲಿ ಹೊಸತನ ತರುವ ಬಗ್ಗೆ ಬಿಸಿಸಿ ಯೋಚಿಸುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, 167 ಏಕದಿನ ಪಂದ್ಯಗಳನ್ನು ಆಡಿರುವ ಮತ್ತು ಪ್ರಸ್ತುತ ಟೀಂ ಇಂಡಿಯಾ ಕ್ರಿಕೆಟಿಗರಲ್ಲಿ ಮೂರನೇ ಅತ್ಯಧಿಕ (6793) ರನ್‌ ಗಳಿಸಿರುವ ಆಟಗಾರನನ್ನು ಏಕಾಏಕಿ ತಿರಸ್ಕರಿಸುವುದು ಬಿಸಿಸಿಐಗೂ ಸುಲಭವಲ್ಲ. ಜನವರಿಯಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಆರು ಏಕದಿನ ಪಂದ್ಯಗಳನ್ನು ಧವನ್‌ಗೆ ನೀಡುವ  ಚಿಂತನೆ ಇದೆ. ಆ ನಂತರ ಮಾರ್ಚ್ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಧವನ್‌ ಭವಿಷ್ಯ ನಿರ್ಧಾರವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!