ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಭೂಪೇಂದ್ರ ಪಟೇಲ್ ಸೋಮವಾರ ಗಾಂಧಿನಗರದಲ್ಲಿ ಸತತ ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು 18ನೇ ಮುಖ್ಯಮಂತ್ರಿಯಾಗಿ ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನೇತೃತ್ವದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಮೂಲಗಳ ಪ್ರಕಾರ, ಭೂಪೇಂದ್ರ ಪಟೇಲ್ ಅವರೊಂದಿಗೆ ಸುಮಾರು 20 ಕ್ಯಾಬಿನೆಟ್ ಸಚಿವರು ಸಹ ಇಂದೇ ಪ್ರಮಾಣವಚನ ಸ್ವೀಕರಿಸಲಿದ್ದು, ಮರುದಿನವೇ ತಮ್ಮ ಕಚೇರಿಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದು ಮುನ್ನಡೆದಿದೆ. ಬಿಜೆಪಿ ಸತತ ಏಳನೇ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಪಟೇಲ್ ತಮ್ಮದೇ ದಾಖಲೆಯನ್ನು ಮುರಿದು 2022ರ ಚುನಾವಣೆಯಲ್ಲಿ ಘಟ್ಲೋಡಿಯಾ ಕ್ಷೇತ್ರದಿಂದ 1,91,000 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದರು.