ಹೊಸದಿಗಂತ ವರದಿ, ಹುಬ್ಬಳ್ಳಿ
ರಾಜ್ಯದ ರೈತರ ಹೊರಾಟಕ್ಕೆ ಸರ್ಕಾರ ಸ್ಪಂದಿಸಿ ಪ್ರತಿ ಟನ್ ಕಬ್ಬಿಗೆ 50 ರೂ. ಹೆಚ್ಚಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ ರೈತರ ಇನ್ನು ಹಲವಾರು ಸಮಸ್ಯೆಗಳಿದ್ದು, ಸರ್ಕಾರ ಸೂಕ್ತವಾಗಿ ಪರಿಹರಿಸಬೇಕು ಎಂದು ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಯುವುದರಲ್ಲಿ ರಾಜ್ಯ ಮೂರನೇ ಸ್ಥಾನವಿದೆ. ಕೇಂದ್ರ ಸರ್ಕಾರ 2021-22 ನೇ ಸಾಲಿನಲ್ಲಿ ಎಫ್ಆರ್ ಪಿ ದರ 29 ರೂ. ನಿಗದಿ ಮಾಡಿತ್ತು. 2022-23 ನೇ ಸಾಲಿಗೆ ಹೆಚ್ಚುವರಿ 150 ರೂ. ನೀಡಲು ನಿಗದಿ ಮಾಡಿದೆ. ಸದ್ಯ ಎಥೆನಾಲ್ ಹಾಗೂ ಸಕ್ಕರೆ ಉತ್ಪಾದನ ಲಾಭಾಂಶವಾಗಿ 200 ರಷ್ಟು ಹೆಚ್ಚುವರಿ ದರ ಸಿಗಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 89 ಸಕ್ಕರೆ ಕಾರ್ಖಾನೆಗಳಿವೆ. ಇದರಲ್ಲಿ 72 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. 14 ಸಹಕಾರಿ ವಲಯ, 9 ಸಹಕಾರಿ ವಲಯ(ಗುತ್ತಿಗೆ),50 ಖಾಸಗಿ ವಲಯದ ಕಾರ್ಖಾನೆಗಳಿವೆ. ಇವುಗಳು 2021-22 ರಲ್ಲಿ 622.26 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಅರೆದು 59.78 ಟನ್ ಸಕ್ಕರೆ ಉತ್ಪಾದಿಸಿದೆ ಎಂದರು.
ಕಬ್ಬು ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ಮಾತನಾಡಿ ಸಮಸ್ಯೆ ಪರಿಹರಿಸಿದ್ದಾರೆ. ರೈತರ ಪರವಾದ ಹಲವಾರು ಯೋಜನೆ ತಂದು ಅನುಕೂಲ ಮಾಡಿದೆ ಎಂದಿದ್ದಾರೆ.
ರೈತ ಮೋರ್ಚಾದವರಿಗೆ ಟಿಕೆಟ್ ಗೆ ಆಗ್ರಹ:
ಬಿಜೆಪಿಯಲ್ಲಿ ರೈತ ಮೋರ್ಚಾ ಬಲಿಷ್ಠ ಸಂಘಟನೆಯಾಗಿದೆ. ಹಲವಾರು ಮೋರ್ಚಾ ಕಾರ್ಯಕರ್ತರು ಶ್ರಮವಹಿಸಿ ದುಡಿಯುತ್ತಿದ್ದಾರೆ. ಆದರಿಂದ ರೈತರ ಸಮಸ್ಯೆ ಸ್ಥಳೀಯವಾಗಿ ಅರಿತುಕೊಂಡಿದ್ದಾರೆ. ಆದರಿಂದ ಸರ್ಕಾರ ಮೋರ್ಚಾದಲ್ಲಿ ಪ್ರಾಮಾಣಿಕ ಕೆಲಸ ಮಾಡಿದವರಿಗೆ ಟಿಕೆಟ್ ನೀಡವ ಭರವಸೆ ಇದೆ. ನಮ್ಮ ಬೇಡಿಕೆ ಅದೇ ಆಗಿದೆ ಎಂದರು.
ಜನವರಿಯಲ್ಲಿ ರೈತ ಸಮಾವೇಶ:
ಬರುವ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ರೈತ ಸಮಾವೇಶ ನಡೆಸುವ ಚಿಂತನೆ ಇದೆ. ಸುಮಾರು ೧೦ ಲಕ್ಷ ರೈತರು ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಪ್ರಧಾನಿ ಮೋದಿಯವರನ್ನು ಆಹ್ವಾನಿಸಲಾಗುವುದು. ಡಿಸೆಂಬರ್ ಅಂತ್ಯದಲ್ಲಿ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಹೇಳಿದರು.
ರೈತ ಮೋರ್ಚಾ ಮಹಾನಗರ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ, ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಘವೇಂದ್ರ ಪಾಟೀಲ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟ್ಕರ್, ಮಂಜುನಾಥ ನೀರಲಕಟ್ಟಿ, ರವಿ ನಾಯಕ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ