ಹೊಸದಿಗಂತ ವರದಿ, ಮಡಿಕೇರಿ:
ಆನೆ – ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಾವಿಗೀಡಾಗುವವರ ಕುಟುಂಬಕ್ಕೆ 15ಲಕ್ಷ ರೂ.ಗಳ ಪರಿಹಾರ ದೊರಕಲಿದೆ.
ಹಾಸನ ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಸೋಮವಾರ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ತೀರ್ಮಾನದಂತೆ ಮಾನವ ಜೀವ ಹಾನಿಗೆ ನೀಡುವ ಪ್ರಸಕ್ತ ನೀಡಲಾಗುತ್ತಿರುವ 7.5 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು 15 ಲಕ್ಷ ರೂ. ಗಳಿಗೆ, ಶಾಶ್ವತ ಅಂಗವಿಕಲತೆಗೆ ನೀಡುವ ಪರಿಹಾರವನ್ನು 5 ಲಕ್ಷ ರೂ. ಗಳಿಂದ 10 ಲಕ್ಷ ರೂ. ಗಳಿಗೆ, ಭಾಗಶಃ ಅಂಗವಿಕಲತೆಗೆ ನೀಡುವ ಪರಿಹಾರವನ್ನು 2.5 ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳಿಗೆ, ಗಾಯಗೊಂಡವರಿಗೆ ನೀಡುವ ಪರಿಹಾರ ಮೊತ್ತ 30 ಸಾವಿರ ರೂ. ಗಳಿಂದ 60 ಸಾವಿರ ರೂ. ಗಳಿಗೆ, ಆಸ್ತಿ ಹಾನಿಗೆ ಪರಿಹಾರ ಮೊತ್ತ 10 ಸಾವಿರ ರೂ. ಗಳಿಂದ 20 ಸಾವಿರ ರೂ.ಗಳಿಗೆ ಹಾಗೂ ಜೀವ ಹಾನಿ ಅಥವಾ ಶಾಶ್ವತ ಅಂಗವಿಕಲತೆಯ ಪ್ರಕರಣಗಳಿಗೆ ನೀಡುವ ಕುಟುಂಬ ಮಾಸಾಶನದ ಮೊತ್ತ ಮಾಸಿಕ ರೂ.2 ಸಾವಿರದಿಂದ 4,000 ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಬೆಳೆಹಾನಿಗೆ ನೀಡುತ್ತಿರುವ ಪರಿಹಾರವನ್ನೂ ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.
ಕೊಡಗು ಹಾಸನ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಾರಂಭ ಮಾಡಿವೆ. ಈ ಕಾರ್ಯಪಡೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಹಾಗೂ
ಕೊಡಗು ಫೌಂಡೇಷನ್ ಮಾದರಿಯಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಮಾನವ-ವನ್ಯಪ್ರಾಣಿ ಫೌಂಡೇಷನ್ ಸ್ಥಾಪಿಸಲು ತೀರ್ಮಾನಿಸಲಾಯಿತು.
ರೈತರ ಭೂಮಿಯಲ್ಲಿ ಸೌರವಿದ್ಯುತ್ ಬೇಲಿ ನಿರ್ಮಿಸಲು ಶೇ. 50:50ರ ಅನುಪಾತದ ಯೋಜನೆಯ ಷರತ್ತನ್ನು ಸಡಿಲಿಸಿ, ವೈಯಕ್ತಿಕ ಬೇಲಿ ನಿರ್ಮಾಣಕ್ಕೆ ಸರ್ಕಾರದ ಪಾಲನ್ನು ಶೇ. 60ಕ್ಕೆ ಹೆಚ್ಚಿಸಲು ಹಾಗೂ ಅರಣ್ಯದ 5 ಕಿ.ಮೀ. ಸುತ್ತಳತೆಯ ಷರತ್ತನ್ನು ಸಡಿಲಿಸಲು ತೀರ್ಮಾನಿಸಲಾಯಿತು. ಅರಣ್ಯದ ಅಂಚಿನಲ್ಲಿ ಸಾಮೂಹಿಕ ಬೇಲಿ ನಿರ್ಮಿಸಲು ಅನುಮೋದನೆ ನೀಡಲಾಯಿತು. ಇದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ನುಡಿದರು.
ಸಭೆಯಲ್ಲಿ ಅರಣ್ಯ , ಪರಿಸರ ಹಾಗೂ ವನ್ಯಜೀವಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ