ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್‌ವೀರ್ ಸಿಂಗ್ ಜಗತ್ತು ವೀಕ್ಷಿಸಿದ ಕಾರ್ಯಕ್ರಮವೊಂದರಲ್ಲಿ ಕಾಂತಾರ ಚಿತ್ರವನ್ನು ಅಣಕಿಸಿದ್ದಾರೆ. ಸಿನಿಮಾ ತುಂಬಾ ಇಷ್ಟವಾಗಿದೆ, ರಿಷಭ್ ನಟನೆ ಅದ್ಭುತ ಎಂದು ಹೇಳುವ ನಿಟ್ಟಿನಲ್ಲಿ ದೈವವನ್ನು ಕೆಟ್ಟದಾಗಿ ಅನುಕರಣೆ ಮಾಡಿದ್ದಾರೆ.
ಚಾವುಂಡಿ ದೈವವನ್ನು ದೆವ್ವ ಎಂದು ಹೇಳಿದ್ದ ನಟ ರಣ್‌ವೀರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ನಟನ ಅತಿರೇಕದ ವರ್ತನೆ ಕಂಡು ಕರುನಾಡ ಜನ ಗರಂ ಆಗಿದ್ದಾರೆ.
ಹಿಂದು ಜನಜಾಗೃತಿ ಸಮಿತಿ (ಎಚ್ಜೆಎಸ್) ರಣ್‌ವೀರ್ ಸಿಂಗ್ ವಿರುದ್ಧ ಗೋವಾದ ಪಣಜಿಯಲ್ಲಿ ದೂರು ದಾಖಲಿಸಿದ್ದು, ರಣ್‌ವೀರ್ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ರಣ್‌ವೀರ್ ಸಿಂಗ್ ದೈವವನ್ನು ದೆವ್ವ ಎಂದು ಕರೆಯುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಚಾವುಂಡಿ’ ದೈವವು ಭಕ್ತರಿಗೆ ಪೂಜನೀಯವಾಗಿದ್ದು, ತುಳು ಸಮುದಾಯಕ್ಕೆ ಅತ್ಯಂತ ಮಹತ್ವದ ದೈವವಾಗಿದೆ. ಆದರೆ ದೈವವನ್ನು ಕೆಟ್ಟ ರೀತಿಯಲ್ಲಿ ರಣ್‌ವೀರ್ ಅನುಕರಣೆ ಮಾಡಿದ್ದಾರೆ. ರಣ್‌ವೀರ್ ಸಿಂಗ್ಈ ರೀತಿಯ ನಡೆಯು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಮಾತ್ರವಲ್ಲದೆ, ಸಾರ್ವಜನಿಕ ಶಾಂತಿಯನ್ನು ಕದಡುವ ಕಾರ್ಯವಾಗಿದೆ. ಈ ಕುರಿತು ತನಿಖೆಯನ್ನು ಮಾಡಿ, ನಟನ ವಿಚಾರಣೆ ನಡೆಸಿ, ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.

