ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್‌ಗಳನ್ನು ಕಡ್ಡಾಯವಾಗಿ ಇನ್‌ಸ್ಟಾಲ್ ಮಾಡಲು ದೂರಸಂಪರ್ಕ ಇಲಾಖೆ ಹ್ಯಾಂಡ್‌ಸೆಟ್ ತಯಾರಕರಿಗೆ ಸೂಚಿಸಿದೆ, ಆದರೆ ಈ ವಿಷಯ ವಿವಾದವಾಗಿ ಬದಲಾದ ಹಿನ್ನೆಲೆಯಲ್ಲಿ ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಮಹತ್ವದ ಮಾಹಿತಿ ನೀಡಿದ್ದಾರೆ.
ಬಳಕೆದಾರರು ಸಂಚಾರ್ ಸಾಥಿ ಆ್ಯಪ್ ನಿಮ್ಮ ಫೋನ್ ನಲ್ಲಿ ಇಟ್ಟುಕೊಳ್ಳಲು ಬಯಸದಿದ್ದರೆ, ನೀವು ಅದನ್ನು ಡಿಲೀಟ್ ಮಾಡಬಹುದು, ಇದು ಆಪ್ಶನಲ್ ಎಂದು ಹೇಳಿದ್ದಾರೆ. ಈ ಅಪ್ಲಿಕೇಶನ್ ಅನ್ನು ಎಲ್ಲರಿಗೂ ಪರಿಚಯಿಸುವುದು ನಮ್ಮ ಕರ್ತವ್ಯ. ಅದನ್ನು ಅವರ ಮೊಬೈಲ್ ಗಳಲ್ಲಿ ಇಟ್ಟುಕೊಳ್ಳುವುದು ಅಥವಾ ಡಿಲೀಟ್ ಮಾಡುವುದು ಬಳಕೆದಾರರಿಗೆ ಸಂಬಂಧಿಸಿದ್ದು ಎಂದು ಸಿಂಧಿಯಾ ತಿಳಿಸಿದ್ದಾರೆ, ಸರ್ಕಾರವು ಸೈಬರ್ ವಂಚನೆಯನ್ನು ನಿಗ್ರಹಿಸಲು ವಿನ್ಯಾಸಗೊಳಿಸಲಾದ ಸಾಧನಕ್ಕೆ ವ್ಯಾಪಕ ಪ್ರವೇಶವನ್ನು ಖಚಿತಪಡಿಸುತ್ತಿದೆ ಎಂದು ಒತ್ತಿ ಹೇಳಿದರು.
ಈ ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿದ ಬಳಿಕ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದುಹೋದರೆ ಬ್ಲಾಕ್ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋನ್ ದೇಶದ ಬೇರೆ ಕಡೆ ಬಳಕೆಯಾಗುತ್ತಿದ್ದರೂ ಕಾನೂನು ಸಂಸ್ಥೆಗಳಿಗೆ ಎಲ್ಲಿ ಈ ಫೋನ್ ಸಕ್ರಿಯವಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಸೈಬರ್ ಅಪರಾಧ, ನಕಲಿ ಐಇಎಂಐ ಸಂಖ್ಯೆ ಬಳಸಿ ನಡೆಸುವ ಕೃತ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಆ್ಯಪ್ ಇನ್‌ಸ್ಟಾಲ್ ಮಾಡಲು ಕಡ್ಡಾಯ ಮಾಡಿದೆ.
ನವೆಂಬರ್ 28 ರಿಂದ ಜಾರಿಗೆ ಬರುವಂತೆ ದೂರಸಂಪರ್ಕ ಇಲಾಖೆ (DoT) ಹೊಸ ನಿರ್ದೇಶನಗಳನ್ನು ನೀಡಿತ್ತು. ಎಲ್ಲಾ ಮೊಬೈಲ್ ಹ್ಯಾಂಡ್‌ಸೆಟ್ ತಯಾರಕರು ಮತ್ತು ಆಮದುದಾರರು ಭಾರತದಲ್ಲಿ ಬಳಸಲು ಉದ್ದೇಶಿಸಲಾದ ಸಾಧನಗಳಲ್ಲಿ ಸರ್ಕಾರಿ ಸ್ವಾಮ್ಯದ ಸೈಬರ್ ಭದ್ರತಾ ಅಪ್ಲಿಕೇಶನ್ ಅನ್ನು ಸ್ಥಾಪಿಸಲು ಸೂಚಿಸಲಾಗಿತ್ತು. ಆದೇಶವನ್ನು ಕಾರ್ಯಗತಗೊಳಿಸಲು ಕಂಪನಿಗಳಿಗೆ 90 ದಿನಗಳು ಮತ್ತು ವರದಿಗಳನ್ನು ಸಲ್ಲಿಸಲು 120 ದಿನ ಸಮಯ ನೀಡಲಾಗಿದೆ.

