Tuesday, December 2, 2025

ಫೈನಲ್‌ಗೆ ಮುನ್ನ ವಾಟ್ಸಾಪ್ ಡಿಲೀಟ್ ಮಾಡಿದ್ದೆ: ಹೀಗ್ಯಾಕಂದ್ರು ಜೆಮಿಮಾ? ಅಸಲಿ ಕಾರಣವಾದ್ರು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಹಂತಗಳಲ್ಲಿ ಒಂದರ ನಂತರ ಒಂದಾಗಿ ಗೆಲುವು ತಲುಪುತ್ತಿದ್ದ ಸಮಯದಲ್ಲಿ, ಓರ್ವ ಆಟಗಾರ್ತಿಯ ಆಂತರಿಕ ಹೋರಾಟ ಈಗ ಗಮನ ಸೆಳೆದಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮ್ಯಾಚ್‌ವಿನ್ನಿಂಗ್ ಪ್ರದರ್ಶನ ನೀಡಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಜೆಮಿಮಾ ರಾಡ್ರಿಗಸ್, ಆ ಕ್ಷಣದ ಸಂಭ್ರಮದ ನಡುವೆಯೇ ಒತ್ತಡದ ಮತ್ತೊಂದು ರೂಪವನ್ನು ಎದುರಿಸುತ್ತಿದ್ದರು ಎಂಬ ಸತ್ಯ ಹೊರಬಿದ್ದಿದೆ.

ಪಂದ್ಯಶ್ರೇಷ್ಠ ಗೌರವ ಪಡೆದ ತಕ್ಷಣವೇ ಜೆಮಿಮಾ ಮೊಬೈಲ್ ಫೋನ್ ನಿರಂತರವಾಗಿ ರಿಂಗ್ ಆಗತೊಡಗಿತು. ಅಪರಿಚಿತ ಸಂಖ್ಯೆಗಳು, ಅಭಿನಂದನಾ ಕರೆಗಳು, ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಸಂದೇಶಗಳು ಅವರ ಗಮನವನ್ನು ಸಂಪೂರ್ಣವಾಗಿ ವಿಚಲಿತಗೊಳಿಸಿತು. ಫೈನಲ್‌ಗೆ ಸಿದ್ಧವಾಗಬೇಕಿದ್ದ ಸಮಯದಲ್ಲಿ ಈ ಡಿಜಿಟಲ್ ಗದ್ದಲ ಮಾನಸಿಕ ಒತ್ತಡವಾಗಿ ಬದಲಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಜೆಮಿಮಾ, “ಸೆಮಿಫೈನಲ್ ಬಳಿಕ ನನ್ನ ಫೋನ್ ಒಂದು ಕ್ಷಣವೂ ನಿಶ್ಶಬ್ದವಾಗಿರಲಿಲ್ಲ. ನನಗೆ ಯಾರಿಂದ ಕರೆ ಬರುತ್ತಿದೆ ಎಂಬುದೇ ಅರಿವಾಗುತ್ತಿರಲಿಲ್ಲ. ಸುಮಾರು ಸಾವಿರದಷ್ಟು ವಾಟ್ಸಾಪ್ ಸಂದೇಶಗಳು ಬಂದವು. ಇದರಿಂದ ಫೈನಲ್‌ಗೆ ಗಮನ ಕೇಂದ್ರೀಕರಿಸುವುದು ಕಷ್ಟವಾಯಿತು. ಎಂದು ಮನಬಿಚ್ಚಿಕೊಂಡಿದ್ದಾರೆ.

ಇದೇ ಕಾರಣದಿಂದ ಫೈನಲ್ ಪಂದ್ಯಕ್ಕೂ ಮುನ್ನ ತಾತ್ಕಾಲಿಕವಾಗಿ ವಾಟ್ಸಾಪ್ ಡಿಲೀಟ್ ಮಾಡುವ ಕಠಿಣ ನಿರ್ಧಾರ ಕೈಗೊಂಡರು. ಅಗತ್ಯವಿದ್ದರೆ ಸಾಮಾನ್ಯ ಕರೆ ಅಥವಾ ಮೆಸೇಜ್ ಮೂಲಕ ಸಂಪರ್ಕಿಸಬಹುದು ಎಂದು ಆತ್ಮೀಯರಿಗೆ ಮಾತ್ರ ಮಾಹಿತಿ ನೀಡಿದರು. ಈ ಡಿಜಿಟಲ್ ಮೌನವೇ ಫೈನಲ್‌ಗೆ ಮಾನಸಿಕವಾಗಿ ತಮಗೆ ಬಲ ನೀಡಿದಂತೆ ಜೆಮಿಮಾ ಹೇಳಿಕೊಂಡಿದ್ದಾರೆ.

error: Content is protected !!