ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಮಹಿಳಾ ಸರ್ಕಾರಿ ನೌಕರರಿಗೆ ಋತುಚಕ್ರ ರಜಾ ಸೌಲಭ್ಯವನ್ನು ಕಲ್ಪಿಸಿ ರಾಜ್ಯ ಸರ್ಕಾರ ಮಂಗಳವಾರ ಅಧಿಕೃತ ಆದೇಶ ಹೊರಡಿಸಿದೆ.
ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಷರತ್ತುಗಳಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಕಾಯಂ/ಗುತ್ತಿಗೆ/ಹೊರಗುತ್ತಿಗೆ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಪ್ರತಿ ತಿಂಗಳು ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನಸಹಿತ ರಜೆಯ ಸೌಲಭ್ಯವನ್ನು ಮಂಜೂರು ಮಾಡಿ ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು.
ರಾಜ್ಯ ಮಹಿಳಾ ಸರ್ಕಾರಿ ನೌಕರರ ಮನೋಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಲು ಸರ್ಕಾರವು ತೀರ್ಮಾನಿಸಿ ಆದೇಶ ಹೊರಡಿಸಿದೆ.
ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ.
ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
ಸರ್ಕಾರಿ ನೌಕರರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಮಹಿಳಾ ನೌಕರರಿಗೆ ಮಾಸಿಕ ಒಂದರಂತೆ ಸಂಬಳ ಸಹಿತ ಋತುಚಕ್ರ ರಜೆಯನ್ನು 52 ವರ್ಷದವರೆಗೆ ನೀಡಲು ಬುಧವಾರ (ಡಿ.2) ಸರ್ಕಾರದ ಆದೇಶ ಹೊರಡಿಸಿದೆ. ಹೀಗಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದು ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.

