October 16, 2026
Friday, October 16, 2026
spot_img

ಯಾವುದೇ ಕಾರಣಕ್ಕೂ ಮೈಸೂರಿನ ರೇಷ್ಮೆ ಸೀರೆ ಉತ್ಪಾದನಾ ಘಟಕ ಮುಚ್ಚುವುದಿಲ್ಲ: ರಾಜ್ಯ ಸರ್ಕಾರ ಸ್ಪಷ್ಟ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಮೈಸೂರಿನ ರೇಷ್ಮೆ ಸೀರೆ ಉತ್ಪಾದನಾ ಘಟಕವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.

ಶಾಸಕ ಟಿ.ಎಸ್. ಶ್ರೀವತ್ಸ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲ ಅಧಿಕಾರಿಗಳು ರೇಷ್ಮೆ ಸೀರೆ ಉತ್ಪಾದನಾ ಘಟಕದ ಬಗ್ಗೆ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ, ರೇಷ್ಮೆ ಘಟಕದ ಜಾಗವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಮನವಿ ಮಾಡಿದ್ದರು. ತಪ್ಪನ್ನು ಸರಿಪಡಿಸಲಾಗಿದ್ದು, ಘಟಕ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಆತಂಕ ಬೇಡ ಎಂದು ಹೇಳಿದರು. ಈ ಘಟಕದಲ್ಲಿ ದಿನವೊಂದಕ್ಕೆ 350 ರಿಂದ 400 ಸೀರೆಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಎಲ್ಲವೂ ಅದೇ ದಿನ ಮಾರಾಟವಾಗುತ್ತಿದೆ. ಕೆ ಎಸ್ ಐಸಿಯ ಸೀರೆ ಉತ್ತಮ ಗುಣಮಟ್ಟದಿಂದ ಕೂಡಿದೆ. ಹೀಗಾಗಿ ಎಚ್ಚರಿಕೆಯಿಂದ ಉತ್ಪಾದನೆ ಮಾಡಬೇಕಿದೆ. ಇದಕ್ಕಾಗಿ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಖರೀದಿಸಿ ತರಬೇಕು. ರೇಷ್ಮೆಗೂಡುಗಳಿಗೆ ಬೇಡಿಕೆ ಇದ್ದು, ತಮಿಳುನಾಡು, ಆಂಧ್ರಪ್ರದೇಶದಿಂದ ರೇಷ್ಮೆಗೂಡು ಮತ್ತು ನೂಲು ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಆರ್. ಅಶೋಕ, ಕೆಎಸ್ ಐಸಿ ಘಟಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದೆ. ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಬೇಕು. ರೇಷ್ಮೆ ನಿಗಮ ಈ ವರ್ಷ 96 ಕೋಟಿ ರೂಪಾಯಿ ಲಾಭಗಳಿಸಿದ್ದು, ಅದರಲ್ಲಿ 1 ಕೋಟಿ ರೂಪಾಯಿಗಳನ್ನು ಕಾರ್ಮಿಕರ ವೇತನಕ್ಕೆ ಖರ್ಚು ಮಾಡಬೇಕು. ಮೈಸೂರಿನ ರೇಷ್ಮೆ ಉತ್ಪಾದನಾ ಘಟಕವನ್ನು ಸರ್ಕಾರ ಮುಚ್ಚುವ ಹುನ್ನಾರ ನಡೆಸಿದೆ. ಇದು ಸರಿಯಲ್ಲ ಎಂದು ಹೇಳಿದರು.

ಜೇವರ್ಗಿ ತಾಲೂಕಿನ ಹೊನ್ನಾಳ-ತುನ್ನೂರು ಸೇತುವೆ ಕಾಮಗಾರಿಯನ್ನು ಮುಂದಿನ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸದಸ್ಯ ಅಜಯ್ ಧರ್ಮಸಿಂಗ್ ಪ್ರಶ್ನೆಗೆ ಉತ್ತರಿಸಿದ ಸಚಿವರು ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದಲ್ಲಿ ನಿವೇಶನಗಳಿಗಾಗಿ ಅರ್ಜಿ ಹಾಕಿರುವ ಎಲ್ಲ ಮಾಜಿ ಸೈನಿಕರಿಗೆ ವರ್ಷಾಂತ್ಯದ ವೇಳೆಗೆ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಸದಸ್ಯ ಬಿ.ಪಿ. ಹರೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವ ತಾಲೂಕು, ಜಿಲ್ಲೆಯಲ್ಲಿ ನಿವೇಶನಕ್ಕಾಗಿ ಎಷ್ಟು ಮಂದಿ ಸೈನಿಕರು ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಹೀಗಾಗಿ ಅರ್ಜಿ ಸಲ್ಲಿಸಿದ ಎಲ್ಲರ ಅರ್ಜಿಗಳನ್ನು ಪರಿಶೀಲಿಸಿ, ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Must Read