ಹೊಸದಿಗಂತ ವರದಿ,ಮಡಿಕೇರಿ:
ಮ್ಯಾಕ್ಸಿಕ್ಯಾಬ್ ಹಾಗೂ ಬೆಲೆನೋ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 8ಮಂದಿ ರೈತರು ಗಾಯಗೊಂಡಿರುವ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.
ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ರೈತರು ಕಾಸರಗೋಡಿನಲ್ಲಿ ನಡೆದ ಕೃಷಿ ಮೇಳದಲ್ಲಿ ಹಿಂತಿರುಗುತ್ತಿದ್ದವರು ಎಂದು ಹೇಳಲಾಗಿದೆ.
ಸೋಮವಾರಪೇಟೆಯ ಆರ್ ರಾಮಚಂದ್ರ ಎಂಬವರಿಗೆ ಸೇರಿದ (ಕೆಎ 46- 2299ರ ಮ್ಯಾಕ್ಸಿಕ್ಯಾಬ್’ನಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರದ ಸುಮಾರು 12 ಮಂದಿ ರೈತರು ಕೃಷಿ ಮೇಳಕ್ಕೆ ತೆರಳಿದ್ದು, ಶುಕ್ರವಾರ ರಾತ್ರಿ ಮರಳಿ ಬರುತ್ತಿದ್ದಾಗ ಗುಡ್ಡೆಹೊಸೂರು ಬಳಿ ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ತೆರಳುತ್ತಿದ್ದ ಬೆಲೆನೋ ಕಾರು (ಕೆಎ -12 ಝೆಡ್ 8560) ಡಿಕ್ಕಿಯಾಗಿದೆ.
ಪರಿಣಾಮವಾಗಿ ಮ್ಯಾಕ್ಷಿಕ್ಯಾಬ್’ನಲ್ಲಿದ್ದ ಒಟ್ಟು 12 ಮಂದಿ ಪೈಕಿ 8 ಮಂದಿ ಗಾಯಗೊಂಡಿದ್ದು, ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಮ್ಯಾಕ್ಸಿಕ್ಯಾಬ್ ಮಾಲಕ ಆರ್. ರಾಮಚಂದ್ರ ಅವರು ನೀಡಿದ ದೂರಿನ ಅನ್ವಯ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಎರಡೂ ವಾಹನಗಳ ಮುಂಭಾಗವೂ ಸಂಪೂರ್ಣವಾಗಿ ಜಖಂಗೊಂಡಿವೆ.