Wednesday, December 3, 2025

ಸೆಲ್ಫಿಗಾಗಿ ಮೈದಾನಕ್ಕೆ ನುಗ್ಗಿದ ಫ್ಯಾನ್! ಅಭಿಮಾನಿಗಳ ಹೃದಯ ಗೆದ್ದ ಪಾಂಡ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ಕ್ರಿಕೆಟ್ ರಸಿಕರಿಗೆ ರೋಚಕ ಕ್ಷಣಗಳನ್ನು ನೀಡಿದರೂ, ಭದ್ರತಾ ವೈಫಲ್ಯದಿಂದಾಗಿ ಆಯೋಜಕರಿಗೆ ಮುಜುಗರ ತಂದೊಡ್ಡಿದೆ. ಬರೋಡಾ ಪರವಾಗಿ ಮೈದಾನಕ್ಕಿಳಿದ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ ಅಜೇಯ 77 ರನ್ ಬಾರಿಸುವ ಮೂಲಕ ತಮ್ಮ ಶಕ್ತಿಯುತ ಪುನರಾಗಮನ ಸೂಚಿಸಿದರು.

ಆದರೆ ಪಂದ್ಯ ಆರಂಭಗೊಂಡ ಕೆಲವೇ ಹೊತ್ತಿನಲ್ಲಿ ಅಭಿಮಾನಿಗಳ ಅತಿಯಾದ ನುಗ್ಗುವಿಕೆ ಸಮಸ್ಯೆಯಾಗಿ ಪರಿಣಮಿಸಿತು. ಉಚಿತ ಪ್ರವೇಶ ಕಲ್ಪಿಸಿದ್ದ ಹೈದೆರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣಿಸಿತು. ಹಾರ್ದಿಕ್ ಪಾಂಡ್ಯ ಹಾಗೂ ಅವರ ಸಹೋದರ ಕೃನಾಲ್ ಪಾಂಡ್ಯ ಬರೋಡಾ ಪರ ಕಣಕ್ಕಿಳಿದರೆ, ಪಂಜಾಬ್ ಪರ ವಿಧ್ವಂಸಕ ಬ್ಯಾಟರ್ ಅಭಿಷೇಕ್ ಶರ್ಮ ಆಡುತ್ತಿದ್ದ ಕಾರಣ ಅಭಿಮಾನಿಗಳ ಉತ್ಸಾಹ ಮಿತಿ ಮೀರಿತು.

ಹಲವು ಬಾರಿ ಅಭಿಮಾನಿಗಳು ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿಕೊಂಡು ನೇರವಾಗಿ ಮೈದಾನಕ್ಕೆ ಧಾವಿಸಿ ಹಾರ್ದಿಕ್ ಅವರ ಪಾದಗಳಿಗೆ ಬಿದ್ದು, ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ವೇಳೆಯೂ ಈ ಘಟನೆಗಳು ಪುನರಾವರ್ತನೆಯಾದವು. ಪಾಂಡ್ಯ ಸಹ ಸೌಮ್ಯತೆಯಿಂದ ವರ್ತಿಸಿ ಅಭಿಮಾನಿಗಳಿಗೆ ಸೆಲ್ಫಿಗೆ ಅವಕಾಶ ನೀಡಿದ್ದು, ಯಾರಿಗೂ ತೊಂದರೆ ಕೊಡಬೇಡಿ ಎಂದು ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಆದರೆ ಈ ಅಶಿಸ್ತಿನ ಕಾರಣ ಪಂದ್ಯ ಹಲವು ಬಾರಿ ಸ್ಥಗಿತಗೊಂಡಿತು. ಈ ಘಟನೆಯ ವೀಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕ್ರೀಡಾಂಗಣ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

error: Content is protected !!