January21, 2026
Wednesday, January 21, 2026
spot_img

ತಾಯಿಯಿಂದ ಬೇರ್ಪಟ್ಟಿದ್ದ ಹುಲಿ ಮರಿಗಳ ರಕ್ಷಣೆ: ಹಸಿವಿನ ಕಿರುಚಾಟವೇ ರಕ್ಷಿಸೋ ದಾರಿಯಾಯ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದ ಜೋಳದ ಹೊಲದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ನಾಲ್ಕು ಹುಲಿ ಮರಿಗಳನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ರಕ್ಷಣೆ ಮಾಡಿದೆ. ಹಸಿವಿನಿಂದ ಕಂಗೆಟ್ಟು ಕಿರುಚಾಡುತ್ತಿದ್ದ ಸುಮಾರು ಮೂರುರಿಂದ ನಾಲ್ಕು ತಿಂಗಳ ವಯಸ್ಸಿನ ಈ ಮರಿಗಳ ಕಿರುಚಾಟದಿಂದ ಅವುಗಳ ಸ್ಥಳ ಪತ್ತೆಹಚ್ಚಿ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಜನವಸತಿ ಪ್ರದೇಶದತ್ತ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಡ್ರೋನ್ ಮೂಲಕ ಪರಿಶೀಲನೆ ನಡೆಸಿದಾಗ ಹುಲಿ ಹಾಗೂ ಅದರ ಮರಿಗಳು ಜೋಳದ ಹೊಲದಲ್ಲಿ ಇರುವುದನ್ನು ದೃಢಪಡಿಸಿತ್ತು. ಮೊದಲ ಹಂತದ ಕಾರ್ಯಾಚರಣೆಯಲ್ಲಿ ತಾಯಿ ಹುಲಿ ಮಾತ್ರ ಸೆರೆ ಸಿಕ್ಕಿದ್ದು, ಮರಿಗಳು ಕಾಣೆಯಾಗಿದ್ದರಿಂದ ಸಿಬ್ಬಂದಿಯಲ್ಲಿ ಹೆಚ್ಚಿನ ಆತಂಕ ಮೂಡಿತ್ತು. ಬಳಿಕ ನಿರಂತರ ಹುಡುಕಾಟ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳ ಸಹಾಯದಿಂದ ಮತ್ತೆ ಕಾರ್ಯಾಚರಣೆ ನಡೆಸಿ ನಾಲ್ಕು ಮರಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹುಲಿಗಳ ಸಂಚಾರ ಹೆಚ್ಚಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಹುಲಿ ಮರಿಗಳ ಸುರಕ್ಷಿತ ರಕ್ಷಣೆ ಸ್ಥಳೀಯ ಜನರಲ್ಲಿ ಸ್ವಲ್ಪ ನೆಮ್ಮದಿಯ ಭಾವನೆ ಮೂಡಿಸಿದೆ.

Must Read