ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಹಾಗೂ ದೇಶದ ಪಾರಂಪರಿಕ ಸ್ಮಾರಕಗಳ ಅಭಿವೃದ್ಧಿಯ ಮೂಲಕ ಅವುಗಳಿಗೆ ಹೊಸ ರೂಪು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸ್ವದೇಶದರ್ಶನ-2.0 ಯೋಜನೆಯಡಿಯಲ್ಲಿ ಬಿಹಾರದ ಎರಡು ಸ್ಥಳಗಳನ್ನು ಅಭಿವೃದ್ಧಿಪಡಿಸುವುದಾಗಿ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ. ಗಯಾ ಮತ್ತು ನಳಂದವನ್ನು ಸ್ವದೇಶ್ ದರ್ಶನ್ 2.0 ಅಡಿಯಲ್ಲಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ ಎಂದು ಅವರು ಸಂಸತ್ತಿಗೆ ನೀಡಿದ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯವು ʼಸ್ವದೇಶ ದರ್ಶನʼ ಯೋಜನೆಯನ್ನು ʼಸ್ವದೇಶ ದರ್ಶನ 2.0ʼ ಎಂದು ಬದಲಿಸಿದೆ. ಇದರಡಿ ಪ್ರವಾಸಿ ಕೇಂದ್ರಗಳ ಸುಸ್ಥಿರ ಅಭಿವೃದ್ಧಿಯ ಗುರಿಯೊಂದಿಗೆ ಈ ಯೋಜನೆ ಜಾರಿಗೆ ಬಂದಿದೆ. ಗಯಾ ಮತ್ತು ನಳಂದಾವನ್ನು SD2.0 ಅಡಿಯಲ್ಲಿ ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ ಹಾಗೆಯೇ ಬಿಹಾರದ ಸಿತಾಮರ್ಹಿ ಜಿಲ್ಲೆಯ ಪುನೌರಾ ಧಾಮ್ ಅನ್ನು ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆಯ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವರ್ಧನೆ ಅಭಿಯಾನದ( PRASHAD) ಅಡಿಯಲ್ಲಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ.
ಸ್ವದೇಶ್ ದರ್ಶನ್ ಯೋಜನೆಗಳ ಅಡಿಯಲ್ಲಿ, ಪ್ರಸಾದ್ ಮತ್ತು ಕೇಂದ್ರ ಏಜೆನ್ಸಿಗಳು ದೇಶದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ನೆರವು ನೀಡುತ್ತವೆ.ಸಚಿವಾಲಯವು 2015 ರಲ್ಲಿ ಸ್ವದೇಶ್ ದರ್ಶನ್ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 76 ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
ಸಚಿವಾಲಯದ ಪ್ರಕಾರ, ‘ವೋಕಲ್ ಫಾರ್ ಲೋಕಲ್ʼ ಎಂಬ ಮಂತ್ರದೊಂದಿಗೆ, ಸ್ವದೇಶ್ ದರ್ಶನ್ 2.0 ಎಂಬ ಪರಿಷ್ಕೃತ ಯೋಜನೆಯು ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಯ ಮೂಲಕ ಭಾರತವನ್ನು ಪ್ರವಾಸಿ ಕೇಂದ್ರವನ್ನಾಗಿಸಿ ಆತ್ಮ ನಿರ್ಭರ ಭಾರತಕ್ಕೆ ಕೊಡುಗೆ ನೀಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಈ ಯೋಜನೆಯಡಿ ಪ್ರಸ್ತುತ ಎರಡು ಪ್ರಾಚೀನ ಸ್ಮಾರಕಗಳ ಅಭಿವೃದ್ಧಿಯಾಗಲಿದೆ.