Wednesday, December 3, 2025

Viral | ನಾನು ಮಾಡೋ ಕೆಲಸವನ್ನು ಮನಸ್ಸಿನಿಂದ ದ್ವೇಷಿಸುತ್ತಿದ್ದೇನೆ: ಬೆಂಗಳೂರಿನ ಯುವಕನ ರಾಜೀನಾಮೆ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಹೆಚ್ಚುತ್ತಿರುವ ಕಾರ್ಪೊರೇಟ್ ಕೆಲಸದ ಒತ್ತಡ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ದಿನನಿತ್ಯದ ಓಡಾಟ, ಸಮಯದ ಕೊರತೆ ಮತ್ತು ಮಾನಸಿಕ ಬೇಸರದ ಮಧ್ಯೆ ಬದುಕುತ್ತಿರುವ ಯುವಕರ ಪ್ರತಿಬಿಂಬವಾಗಿ, ಬೆಂಗಳೂರಿನ ಯುವಕನೊಬ್ಬ ಕೆಲಸಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಸಾರ್ವಜನಿಕವಾಗಿ ಘೋಷಿಸಿ ಗಮನ ಸೆಳೆದಿದ್ದಾನೆ.

ಅನ್ಶುಲ್ ಉತ್ತಯ್ಯ ಎಂಬ ಈ ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರಿಂದ ಪ್ರತಿಕ್ರಿಯೆ ಪಡೆದುಕೊಂಡಿದೆ.

ತಾನು ಮಾಡುತ್ತಿರುವ ಕೆಲಸವನ್ನು ಮನಸ್ಸಿನಿಂದ ದ್ವೇಷಿಸುತ್ತಿದ್ದೇನೆ, ಈ ಉದ್ಯೋಗ ನನ್ನ ಜೀವನಕ್ಕೆ ನೆಮ್ಮದಿ ಕೊಡುತ್ತಿಲ್ಲ ಎಂದು ಅನ್ಶುಲ್ ತಮ್ಮ ವಿಡಿಯೋದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಆಸ್ಟ್ರೇಲಿಯಾದ ಎರಡು ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದರೂ, ಅದನ್ನು ಬಿಟ್ಟು ಈ ಕೆಲಸಕ್ಕೆ ಬಂದೆ ಎಂಬ ಪಶ್ಚಾತ್ತಾಪವೂ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಬೆಳಿಗ್ಗೆ 7.45ಕ್ಕೆ ಎದ್ದು ಕಚೇರಿಗೆ ಹೋಗುವ ಒತ್ತಡ, ಇಷ್ಟವಿಲ್ಲದ ಕೆಲಸ, ಸಮಯದ ವ್ಯರ್ಥತೆ ಇವುಗಳು ದಿನೇದಿನೇ ಬೇಸರ ಹೆಚ್ಚಿಸುತ್ತಿವೆ ಎಂದು ಹೇಳಿದ್ದಾರೆ. ಸ್ಥಿರ ಆದಾಯ ಕೈ ಬಿಡುವ ಭಯ ಇದೆ ಎಂಬ ಆತಂಕವನ್ನೂ ಅವರು ಬಹಿರಂಗಪಡಿಸಿದ್ದಾರೆ.

ಈ ವಿಡಿಯೋ ಪ್ರಕಟವಾದ ಬಳಿಕ ಇನ್‌ಸ್ಟಾಗ್ರಾಮ್ನಲ್ಲಿ ಅನ್ಶುಲ್ ಅವರ ಫಾಲೋವರ್‌ ಸಂಖ್ಯೆ ದ್ವಿಗುಣಗೊಂಡಿದ್ದು, ಮಿಲಿಯನ್‌ಕ್ಕೂ ಅಧಿಕ ವೀಕ್ಷಣೆ ದಾಖಲಾಗಿವೆ. ಅವರ ನಿರ್ಧಾರಕ್ಕೆ ಕೆಲವರು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಆತುರದ ನಿರ್ಧಾರ ಎಂದು ಟೀಕಿಸಿದ್ದಾರೆ. ಕಾರ್ಪೊರೇಟ್ ಒತ್ತಡದ ನಡುವೆ ಯುವಮನದ ದ್ವಂದ್ವವನ್ನು ಈ ಘಟನೆಯು ಮತ್ತೊಮ್ಮೆ ಸಮಾಜದ ಮುಂದೆ ತಂದಿದೆ.

error: Content is protected !!