ಹೊಸದಿಗಂತ ವರದಿ ಮಡಿಕೇರಿ:
ಮಡಿಕೇರಿ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿಯ ಉದಯ ಪ್ರೌಢಶಾಲೆಯ ಸಭಾಂಗಣದಲ್ಲಿ ಜ. 28 ರಂದು ನಡೆಸುವಂತೆ ಬೆಟ್ಟಗೇರಿಯ ಉದಯ ಪ್ರೌಡಶಾಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನವನ್ನು ಬೆಟ್ಟಗೇರಿ ಗ್ರಾಮದಲ್ಲಿ ನಡೆಸಬೇಕೆಂದು ತಾಲೂಕು ಸಮಿತಿ ಆಶಯ ಪಟ್ಟಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಕಾರ ಸಂಘದ ಪದಾಧಿಕಾರಿಗಳು, ಊರಿನ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಶಾಲೆಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮದ ಅಭಿವೃದ್ಧಿ ಸಂಘ, ಯುವಕ ಸಂಘಗಳು, ಯುವತಿ ಸಂಘಗಳು, ಆಟೋ ಮತ್ತು ವಾಹನ ಚಾಲಕರ ಸಂಘಗಳ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಊರಿನ ಎಲ್ಲಾ ಆಸಕ್ತ ಕನ್ನಡ ಮನಸುಗಳು ಒಂದಾಗಿ ಸೇರಿ ಮಡಿಕೇರಿ ತಾಲೂಕಿನ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಊರಿನ ಹಬ್ಬದಂತೆ ನಡೆಸಿ ಕೊಡಬೇಕೆಂದು ಕೋರಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಅವರು, ಸಮ್ಮೇಳನ ನಡೆಯುವ ಪ್ರದೇಶದ ಪ್ರತಿಯೊಬ್ಬರೂ ಸಮ್ಮೇಳದಲ್ಲಿ ಪಾಲ್ಗೊಳ್ಳಬೇಕು, ಸಮ್ಮೇಳನದಲ್ಲಿ ನಾಡಿಗೆ ಸೇವೆ ಸಲ್ಲಿಸಿ ಗತಿಸಿ ಹೋದವರ ಸೇವೆಗಳನ್ನು ನೆನಪಿಸಿಕೊಳ್ಳುವಂತಹ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುವುದು. ಸಾಹಿತ್ಯ ಸಮ್ಮೇಳನ ನಡೆದ ಪ್ರದೇಶದ ಹಿರಿಮೆ ಗರಿಮೆ, ಆ ಪ್ರದೇಶದಲ್ಲಿ ಬರುವ ಪ್ರಾಕೃತಿಕ ಸೌಂದರ್ಯದ ಪ್ರದೇಶಗಳ ಬಗ್ಗೆ, ದೇವಾಲಯಗಳ ಬಗ್ಗೆ, ಸಾಂಸ್ಕೃತಿಕ ನೆಲೆಗಳ ಬಗ್ಗೆ ಮಾಹಿತಿ ಇರುವಂತಹ ಸ್ಮರಣ ಸಂಚಿಕೆಯನ್ನು ತರಲಾಗುವುದು. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ, ಗೋಷ್ಠಿಗಳು, ಗೀತ ಗಾಯನ ಕಾರ್ಯಕ್ರಮ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಮಾಹಿತಿ ನೀಡಿದರು.
ಶಾಸಕರುಗಳ ಗೌರವಾಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸುವಂತೆಯೂ ಅಲ್ಲದೆ ಸಮ್ಮೇಳನದ ಯಶಸ್ಸಿಗೆ ಪೂರಕವಾಗುವಂತೆ ಹಣಕಾಸು ಸಮಿತಿ, ಆಹಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಅಲಂಕಾರ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹೀಗೆ ಹತ್ತು ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಎಲ್ಲಾ ಸಮಿತಿಗಳಿಗೆ ಅಧ್ಯಕ್ಷರು ಸಂಚಾಲಕರು ಮತ್ತು ಕಾರ್ಯದರ್ಶಿಗಳು ಹಾಗೂ 10 ಜನ ಸದಸ್ಯರು ಸೇರಿದಂತೆ ಸಮಿತಿ ರಚಿಸಿ ಮುಂದಿನ ಸಭೆಯಲ್ಲಿ ಸಮಿತಿಗಳ ಘೋಷಣೆ ಮಾಡುವಂತೆ ತೀರ್ಮಾನಿಸಲಾಯಿತು.
ಅಭೂತಪೂರ್ವ ಕಾರ್ಯಕ್ರಮ:ವೇದಿಕೆಯಲ್ಲಿ ಉಪಸ್ಥಿತರಿದ್ದ ಉದಯ ಪ್ರೌಢಶಾಲೆಯ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಮಾತನಾಡಿ, ನಮ್ಮ ಊರಿನಲ್ಲಿ ನಡೆಸಲಿರುವ ಸಾಹಿತ್ಯ ಸಮ್ಮೇಳನ ಒಂದು ಅಭೂತಪೂರ್ವ ಕಾರ್ಯಕ್ರಮದಂತೆ ನಡೆಸಿ ಕೊಡುವಲ್ಲಿ ತಾವೆಲ್ಲರೂ ಶ್ರಮವಹಿಸುವುದಾಗಿಯೂ ಇಡೀ ಗ್ರಾಮದ ಜನರನ್ನು ಒಗ್ಗೂಡಿಸಿ ಸಮ್ಮೇಳನ ಮಾಡಬೇಕಿದೆ ಎಂದರು.
ಬೆಟ್ಟಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಮ್ಮ ಊರಿನಲ್ಲಿ ಮಾಡುವಂತೆ ತೀರ್ಮಾನಿಸಿದ್ದು ಖುಷಿ ತಂದಿದೆ. ನಾವೆಲ್ಲರೂ ಸೇರಿ ಹಿಂದಿನ ಎಲ್ಲಾ ತಾಲೂಕು ಸಮ್ಮೇಳನಗಳನ್ನು ಮೀರಿಸುವಂತಹ ಸಮ್ಮೇಳನ ನಡೆಸಬೇಕಿದೆ. ಅದಕ್ಕೆ ಪಂಚಾಯಿತಿ ಅಧ್ಯಕ್ಷನಾಗಿ ಎಲ್ಲಾ ಸದಸ್ಯರ ಸಹಕಾರ ಪಡೆದುಕೊಂಡು ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಘೋಷಿಸಿದರು.
ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಅವರು, ಊರಿನ ಎಲ್ಲರೂ ಸೇರಿ ಸಮ್ಮೇಳನವನ್ನು ನಡೆಸುವ ಎಂದು ಅಭಿಪ್ರಾಯಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಈ ಹಿಂದೆ ಪಕ್ಕದ ಚೇರಂಬಾಣೆಯಲ್ಲಿ 10 ನೇ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಸಂದರ್ಭ ಊರಿನ ಪ್ರಮುಖರು ಎಲ್ಲರೂ ನೀಡಿದ ಸಹಕಾರವನ್ನು ನೆನಪಿಸಿಕೊಂಡರಲ್ಲದೆ, ಅದಕ್ಕೂ ಮಿಗಿಲಾದಂತೆ ಈ ಸಮ್ಮೇಳನವನ್ನು ನಡೆಸುವಂತೆ ಸಹಕಾರ ನೀಡಬೇಕು ಎಂದರು.