ಸಂಸ್ಕೃತ ಭಾಷೆ ಅಭಿವೃದ್ಧಿ ನಮ್ಮ ಹೊಣೆಗಾರಿಕೆಯಾಗಲಿ: ಡಾ. ಜನಾರ್ಧನ ಹೆಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹುಬ್ಬಳ್ಳಿ: ಒಂದು ಭಾಷೆ ಉಳಿಯಬೇಕಾದರೆ ಅದರಲ್ಲಿರುವ ಶಬ್ದಗಳು ವೃದ್ಧಿಯಾಗಬೇಕು ಹಾಗೂ ಅವುಗಳನ್ನು ನಿತ್ಯ ವ್ಯವಹಾರದಲ್ಲಿ ಬಳಸಬೇಕು ಎಂದು ಸಂಸ್ಕೃತ ಭಾರತಿ ಸಂಸ್ಥಾಪಕ ಡಾ. ಜನಾರ್ಧನ ಹೆಗಡೆ ಹೇಳಿದರು.

ನಗರದ ಮಧುಕುಂಜ ಸಭಾಂಗಣದಲ್ಲಿ ನಡೆದ ಸಂಸ್ಕೃತ ಸಂಧ್ಯಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಲೂ ಇಂಗ್ಲೀಷ್ ನ ಎಷ್ಟೋ ಶಬ್ದಗಳಿಗೆ ಕನ್ನಡದಲ್ಲಿ ಪರ್ಯಾಯ ಶಬ್ದವಿಲ್ಲ. ಅದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಘುವೀರ ಅವರು 2 ಸಾವಿರ ಪುಟಗಳಷ್ಟು ಶಬ್ದಗಳನ್ನು ಅನ್ವೇಷಿಸಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಇರುವುದು ಕೇವಲ 20 ಲಕ್ಷ ಶಬ್ದಗಳು. ಆದರೆ ಸಂಸ್ಕೃತ ಭಾಷೆಯಲ್ಲಿ ಅನಂತ ಕೋಟಿ ಶಬ್ದಗಳನ್ನು ಸೃಷ್ಟಿಸಬಹುದು. ಇದು ಈ ಭಾಷೆಯ ವೈಶಿಷ್ಟ್ಯ ಎಂದರು.

ಸಂಸ್ಕೃತ ಭಾಷೆ ಉನ್ನತಿಗೆ ಕೇವಲ‌ ಶಬ್ದ ತಯಾರಿಸಿದರೆ ಸಾಲದು ಜೊತೆಗೆ ಅವುಗಳನ್ನು ಬಳಸಬೇಕು. ಇದು‌ ನಮ್ಮ ಹೊಣೆಗಾರಿಕೆ. ಸಂಸ್ಕೃತ ಪ್ರೀತಿ, ಆತ್ಮೀಯತೆ ಅಪೇಕ್ಷಿಸುತ್ತದೆ. ಭಾಷೆ ಜೊತೆ ಒಡನಾಟ ಹೆಚ್ಚಾದರೆ ಅದು ಹೃದಯದ ಭಾಷೆಯಾಗುತ್ತದೆ. ಇವತ್ತಿನ ಸಮಾಜಕ್ಕೆ ಇದು ಅವಶ್ಯಕವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಘಚಾಲಕ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ದೇವವಾಣಿ, ಗೀರ್ವಾಣಿ ಎಂದು ಕರೆಸಿಕೊಳ್ಳುವ ಸಂಸ್ಕೃತ ದೇಶದ 20ಕ್ಕೂ ಅಧಿಕ ಭಾಷೆಗಳಿಗೆ ತಾಯಿಯಾಗಿದೆ.‌ ಅನಾದಿ ಕಾಲದಿಂದ ಇದು ಪಂಡಿತರ ಭಾಷೆಯಷ್ಟೆಯಾಗದೆ ಪಾಮರರ ಭಾಷೆಯೂ ಆಗಿತ್ತು. ನಮ್ಮ ಸನಾತನದ ಬೇರು ಇರುವುದು ಸಂಸ್ಕೃತದಲ್ಲೆ. ಅರ್ಥಶಾಸ್ತ್ರ, ವೇದಗಣಿತ, ವಾಸ್ತು, ಜ್ಯೋತಿಷ್ಯ, ನ್ಯಾಯ, ನೀತಿ, ಕಲೆ ಎಲ್ಲವನ್ನು ವಿಸ್ತೃತವಾಗಿ ಬರೆದದ್ದು ಸಂಸ್ಕೃತ ಭಾಷೆಯಲ್ಲೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!