ಹೊಸದಿಗಂತ ಡಿಜಿಟಲ್ ಡೆಸ್ಕ್:
ಭವಿಷ್ಯದ ಆರ್ಥಿಕತೆಯನ್ನು ಮುನ್ನಡೆಸುವ ಚಾಲಕಗಳು ಎಂಬಂತೆ ಶುರುವಿನಲ್ಲಿ ಭಾರೀ ಸದ್ದು ಮಾಡಿದ್ದ ಕ್ರಿಪ್ಟೋ ಮಾರುಕಟ್ಟೆ 2022ರಲ್ಲಿ ಸಂಪೂರ್ಣವಾಗಿ ಕುಸಿದಿದೆ. ಕ್ರಿಪ್ಟೊ ಕರೆನ್ಸಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಬಿಟ್ ಕಾಯಿನ್, ಇಥೇರಿಯಂ ಪಾಲಿಗಾನ್ ಸೇರಿದಂತೆ ವರ್ಚುವಲ್ ಸ್ವತ್ತುಗಳು 2022ರಲ್ಲಿ ಸಂಪೂರ್ಣ ನೆಲಕಚ್ಚಿದೆ. ಈ ವರ್ಷದಲ್ಲಿ ಪ್ರಮುಖ ಕ್ರಿಪ್ಟೋ ಎಕ್ಸ್ಚೇಂಜ್ ಎಫ್ಟಿಎಕ್ಸ್ ಲಿಕ್ವಿಡಿಟಿ ಕುಸಿದಿಂದಾಗಿ ಪತನಗೊಂಡಿದೆ ಭಾರತದಲ್ಲಿ, ಕ್ರಿಪ್ಟೋ ವಿನಿಮಯ ಕೇಂದ್ರಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ವರದಿಗಳಾಗಿವೆ ಹೀಗಾಗಿ 2022ನೇ ಕ್ಯಾಲೆಂಡರ್ ವರ್ಷವು ಕ್ರಿಪ್ಟೋ ಮಾರುಕಟ್ಟೆಗಳ, ಕ್ರಿಪ್ಟೋ ಕರೆನ್ಸಿಗಳ ಪಾಲಿಗೆ ಅತ್ಯಂತ ಕೆಟ್ಟಕಾಲ ಎಂದೆನಿಸಿದೆ.
ಪ್ರಮುಖ ಖಾಸಗಿ ಕ್ರಿಪ್ಟೋಕರೆನ್ಸಿ ಬಿಟ್ಕಾಯಿನ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 65 ಪ್ರತಿಶತದಷ್ಟು ಕುಸಿತ ಕಂಡಿದೆ. ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು ಸುಮಾರು 47,600ಡಾಲರ್ ಗಳಿಷ್ಟಿದ್ದ ಬಿಟ್ ಕಾಯಿನ್ ಮೌಲ್ಯವು ಡಿಸೆಂಬರ್ 23, 2022 ರಂದು 16,833 ಡಾಲರ್ ಗೆ ತಲುಪಿದೆ. ಅದೇ ರೀತಿ, Ethereum ಸಹ 2022 ರ ಜನವರಿ 1 ರಂದು 3,834 ಡಾಲರ್ ಮೌಲ್ಯವನ್ನು ಹೊಂದಿತ್ತು. ಅದು ಡಿಸೆಂಬರ್ 23 ರ ಹೊತ್ತಿಗೆ 1,221 ಡಾಲರ್ ಗೆ ತಲುಪಿದ್ದು ಇಲ್ಲಿಯವರೆಗೆ 68.15 ಪ್ರತಿಶತದಷ್ಟು ಕುಸಿತವಾಗಿದೆ. 2022 ರಲ್ಲಿ, ಎಲ್ಲಾ ಕ್ರಿಪ್ಟೋಕರೆನ್ಸಿಗಳು ಹೆಚ್ಚಿನ ಚಂಚಲತೆ ಅನುಭವಿಸಿವೆ ಮತ್ತು 2022ರಲ್ಲಿ ತಮ್ಮ ಅತ್ಯಧಿಕ ಕಡಿಮೆ ಬೆಲೆಗೆ ಅಂದರೆ ಸರಿಸುಮಾರು 70-80 ಶೇಕಡಾದಷ್ಟು ಕುಸಿದಿವೆ.
ವಿಶ್ವದ ಅಗ್ರ-ಐದು ಕ್ರಿಪ್ಟೋ ವಿನಿಮಯ ಕೇಂದ್ರಗಳಲ್ಲಿ ಒಂದಾಗಿರುವ ಎಫ್ಟಿಎಕ್ಸ್, ದ್ರವ್ಯತೆ ಬಿಕ್ಕಟ್ಟನ್ನು ಎದುರಿಸಿದೆ. ಅದರ ಮುಖ್ಯಸ್ಥ ಸ್ಯಾಮ್ ಬ್ಯಾಂಕ್ಮನ್-ಫ್ರೈಡ್ ಅವರನ್ನು ಅಮೆರಿಕವು ಬಂಧಿಸಿದ್ದು ವಿಚಾರಣೆಗೆ ಒಳಪಡಿಸುತ್ತಿದೆ. FTX ಮತ್ತು ಅದರ ಸಹೋದರಿ ಟ್ರೇಡಿಂಗ್ ಹೌಸ್ ಅಲ್ಮೇಡಾ ರಿಸರ್ಚ್ ಕಳೆದ ತಿಂಗಳು ದಿವಾಳಿಯಾಗಿ 32 ಶತಕೋಟಿ ಡಾಲರ್ ನಷ್ಟು ಮೌಲ್ಯ ಕಳೆದುಕೊಂಡಿದೆ. ಇದು ಕ್ರಿಪ್ಟೋ ಜಗತ್ತನ್ನು ಬೆಚ್ಚಿಬೀಳಿಸಿದೆ. ಮತ್ತು ಅವುಗಳ ಬೆಲೆ ತೀವ್ರವಾಗಿ ಇಳಿಯಲು ಕಾರಣವಾಗಿದೆ.
2022 ರ ಬಜೆಟ್ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೆಕ್ಷನ್ 115BBH ಅನ್ನು ಪರಿಚಯಿಸಿದರು, ಇದು ಏಪ್ರಿಲ್ 1, 2022 ರಂದು ಅಥವಾ ನಂತರ ಕ್ರಿಪ್ಟೋಕರೆನ್ಸಿಗಳನ್ನು ವ್ಯಾಪಾರ ಮಾಡುವ ಲಾಭದ ಮೇಲೆ 30 ಪ್ರತಿಶತ ತೆರಿಗೆಯನ್ನು (ಜೊತೆಗೆ ಅನ್ವಯಿಸುವ ಹೆಚ್ಚುವರಿ ಶುಲ್ಕ ಮತ್ತು 4 ಪ್ರತಿಶತ ಸೆಸ್) ವಿಧಿಸುತ್ತದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರೂ ಕೂಡ ಬಿಟ್ಕಾಯಿನ್ ಮತ್ತು ಎಥೆರಿಯಮ್ನಂತಹ ಖಾಸಗಿ ಕ್ರಿಪ್ಟೋಕರೆನ್ಸಿಗಳೊಂದಿಗಿನ ದೊಡ್ಡ ಕಾಳಜಿ ಎಂದರೆ ಅವು ಯಾವುದೇ ಆಧಾರವಾಗಿರುವ ಮೌಲ್ಯವನ್ನು ಹೊಂದಿಲ್ಲ ಮತ್ತು ಅವುಗಳನ್ನು ಬೆಳೆಯಲು ಅನುಮತಿಸಿದರೆ, ಮುಂದಿನ ಆರ್ಥಿಕ ಬಿಕ್ಕಟ್ಟು ಅವರಿಂದ ಬರಲಿದೆ ಈ ಆಸ್ತಿಗಳನ್ನು ನಿಷೇಧಿಸಬೇಕು ಎಂದಿರುವುದು ಕ್ರಿಪ್ಟೋ ಹೂಡಿಕೆದಾರರು ಮತ್ತಷ್ಟು ಚಿಂತಿಸುವಂತೆ ಮಾಡಿದೆ.