January21, 2026
Wednesday, January 21, 2026
spot_img

ಬಿಜೆಪಿಯಲ್ಲಿ ಬಣವಿಲ್ಲ, ವಿಜಯೇಂದ್ರ ಮುಂದುವರಿಕೆ ನಿಶ್ಚಿತ: ರೇಣುಕಾಚಾರ್ಯ ಭವಿಷ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬದಲಾವಣೆಗೆ ಒತ್ತಾಯಿಸಿ ಬಂಡಾಯ ಶಾಸಕರ ತಂಡ ದೆಹಲಿಗೆ ಪ್ರಯಾಣ ಬೆಳೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು “ಸೂರ್ಯ-ಚಂದ್ರ ಇರುವಷ್ಟೇ ಸತ್ಯ” ಎಂದು ಅವರು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಪಕ್ಷದಲ್ಲಿ ಯಾವುದೇ ಬಣವಿಲ್ಲ. ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಉತ್ತಮ ಸರ್ಕಾರ ನಡೆಯುತ್ತಿದೆ. ವಿಜಯೇಂದ್ರ ಅವರು ಕಳೆದ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ ಮತ್ತು ಅವರ ನೇತೃತ್ವದಲ್ಲೇ 2028ರ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ದೆಹಲಿಗೆ ಹೋಗಿರುವ ಬಂಡಾಯ ತಂಡದ ಕುರಿತು ವಾಗ್ದಾಳಿ ನಡೆಸಿದ ಅವರು, “ಹಣ ಇದೆ ಅಂತ ಫ್ಲೈಟ್ ಮಾಡಿಕೊಂಡು ದೆಹಲಿಗೆ ಹೋಗಿದ್ದಾರೆ. ಅವರ ಕ್ಷೇತ್ರದಲ್ಲಿ ಇವರು ಬಿಗ್ ಜೀರೋ. ಅಭಿವೃದ್ಧಿ ಇಲ್ಲ, ಶೂನ್ಯ ಸಾಧನೆ. ಇವರಿಗೆ ಜನ 100ಕ್ಕೆ 0 ಅಂಕ ನೀಡುತ್ತಿದ್ದಾರೆ. ರಾಜ್ಯಾಧ್ಯಕ್ಷರ ಬದಲಾವಣೆ ಅಂತ ಇವರು ಹಗಲು ಕನಸು ಕಾಣುತ್ತಿದ್ದಾರೆ. ಚಳಿ ಇದೆ, ಕಾಫಿ ಕುಡಿದು ಬರ್ತಾರೆ ಅಷ್ಟೆ. ಯಾವುದೇ ಹೈಕಮಾಂಡ್ ನಾಯಕರು ಇವರಿಗೆ ಸಮಯ ಕೊಟ್ಟಿಲ್ಲ,” ಎಂದು ವ್ಯಂಗ್ಯವಾಡಿದರು.

ಪಕ್ಷದ ವರಿಷ್ಠರ ಸೂಚನೆಯಂತೆ ತಾವು ಸುಮ್ಮನಿದ್ದೇವೆ ಹೊರತು, ಅದು ತಮ್ಮ ದೌರ್ಬಲ್ಯವಲ್ಲ. ತಮ್ಮ ಹೋರಾಟ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಹೊರತು ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಅಲ್ಲ ಎಂದು ಅವರು ತಿಳಿಸಿದರು.

ಪಕ್ಷದ ನೇತಾರರನ್ನು ನೆನಪಿಸಿದ ರೇಣುಕಾಚಾರ್ಯ, ದೇಶದಲ್ಲಿ ಮೋದಿ, ಅಮಿತ್ ಶಾ, ನಡ್ಡಾ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ಘೋಷಿಸಿದರು. “ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ್ದೇ ಯಡಿಯೂರಪ್ಪ. ಅವರ ರಕ್ತದ ಕಣಕಣದಲ್ಲೂ ಹಿಂದುತ್ವ ಮತ್ತು ಪಕ್ಷವಿದೆ. ಅವರ ನಾಯಕತ್ವದಲ್ಲಿಯೇ ರಾಜ್ಯದಲ್ಲಿ ಪಕ್ಷ ಸಂಘಟನೆ ಆಗಿದೆ” ಎಂದು ಬಿಎಸ್‌ವೈ ಅವರ ಕೊಡುಗೆಯನ್ನು ಬಣ್ಣಿಸಿದರು.

ಅಲ್ಲದೆ, “ಈ ರಾಜ್ಯ ಸರ್ಕಾರ ಸತ್ತು ಹೋಗಿದೆ. ಇದರ ವಿರುದ್ಧ ವಿಜಯೇಂದ್ರ ಮತ್ತು ವಿಪಕ್ಷ ನಾಯಕರ ನೇತೃತ್ವದಲ್ಲಿ ಹೋರಾಟ ಮಾಡ್ತೀವಿ,” ಎಂದು ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಮುಂದಿನ ರೂಪರೇಖೆಯನ್ನು ಸಹ ಅವರು ಸೂಚಿಸಿದರು.

Must Read