Friday, December 26, 2025

ವಿಜಯಪುರ-ಬೆಂಗಳೂರು ರೈಲು ಪ್ರಯಾಣದ ಅವಧಿ ಕಡಿತಕ್ಕೆ ಹೊಸ ರೂಪುರೇಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ದೂರದ ವಿಜಯಪುರದ ನಡುವಿನ ರೈಲು ಪ್ರಯಾಣದ ಅವಧಿಯನ್ನು ಕಡಿತಗೊಳಿಸುವ ಬಹುದಿನಗಳ ಬೇಡಿಕೆಗೆ ಕೊನೆಗೂ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ರೈಲುಗಳನ್ನು ಓಡಿಸಲು ತಮಗೆ ಯಾವುದೇ ತಾಂತ್ರಿಕ ತೊಂದರೆ ಇಲ್ಲ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಖನಿಜ ಭವನದಲ್ಲಿ ನಡೆದ ರಾಜ್ಯದ ವೆಚ್ಚ ಹಂಚಿಕೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ನೈರುತ್ಯ ರೈಲ್ವೆ ಉನ್ನತಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಪ್ರಸ್ತುತ ಬೆಂಗಳೂರು-ವಿಜಯಪುರ ನಡುವಿನ ರೈಲು ಪ್ರಯಾಣಕ್ಕೆ ಸುಮಾರು 15 ಗಂಟೆಗಳು ಬೇಕಾಗುತ್ತಿದ್ದು, ಇದನ್ನು 10 ಗಂಟೆಗಳಿಗೆ ಇಳಿಸಲು ಸಚಿವರು ಮತ್ತು ರೈಲ್ವೆ ಅಧಿಕಾರಿಗಳ ನಡುವೆ ಚರ್ಚೆ ನಡೆದಿದೆ. ಅಧಿಕಾರಿಗಳು ಬೈಪಾಸ್ ಮಾರ್ಗಗಳ ಮೂಲಕ ರೈಲು ಓಡಿಸಲು ಸಮ್ಮತಿಸಿರುವುದು ಮಹತ್ವದ ಹೆಜ್ಜೆಯಾಗಿದೆ.

ಸದ್ಯ, ವಿಜಯಪುರ-ಬೆಂಗಳೂರು ರೈಲುಗಳು ಹುಬ್ಬಳ್ಳಿ ಮತ್ತು ಗದಗ ರೈಲು ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಇಂಜಿನ್ ಬದಲಾಯಿಸಬೇಕಾಗಿರುವುದರಿಂದ ಅನಗತ್ಯವಾಗಿ ಪ್ರಯಾಣದ ಸಮಯ ಹೆಚ್ಚುತ್ತಿದೆ. ಬೈಪಾಸ್ ಮಾರ್ಗಗಳನ್ನು ಬಳಸಿದರೆ ಈ ವಿಳಂಬವನ್ನು ತಪ್ಪಿಸಬಹುದು.

ಹೊಸ ರೈಲುಗಳಿಗೆ ಬೇಡಿಕೆ:

ಆದಾಗ್ಯೂ, ಈಗ ಚಾಲ್ತಿಯಲ್ಲಿರುವ ರೈಲುಗಳ ಮಾರ್ಗವನ್ನು ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈಲ್ವೆ ಮಂಡಳಿಯಿಂದ ಹೊಸ ರೈಲುಗಳ ಮಂಜೂರಾತಿ ಅಗತ್ಯವಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ, ಸಚಿವ ಎಂ.ಬಿ. ಪಾಟೀಲ್ ಅವರು ತಕ್ಷಣವೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಪತ್ರ ಬರೆಯುವುದಾಗಿ ಘೋಷಿಸಿದ್ದಾರೆ.

ಸಭೆಯಲ್ಲಿ, ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ನಿಯಮಿತ ನಿಲುಗಡೆಗಳನ್ನು ಮಾತ್ರ ನೀಡಿ, ನಂತರ ವಿಜಯಪುರದವರೆಗೆ ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ರೈಲು ಸೇವೆ ಆರಂಭಿಸಿದರೆ ಹೆಚ್ಚು ಪರಿಣಾಮಕಾರಿ ಆಗಲಿದೆ ಎಂದು ಸಚಿವರು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಪ್ರಸ್ತುತ, ಈ ಮಾರ್ಗದಲ್ಲಿ ವಂಡಾಲ ಮತ್ತು ಆಲಮಟ್ಟಿ ನಡುವೆ ಜೋಡಿ ಹಳಿ ಕಾಮಗಾರಿ ಮಾತ್ರ ಬಾಕಿ ಇದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸುಮಾರು ಅರ್ಧ ಕಿ.ಮೀ. ಉದ್ದದ ಬೃಹತ್ ಉಕ್ಕು ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿಯು 2026ರ ಫೆಬ್ರವರಿಯೊಳಗೆ ಮತ್ತು ವಿದ್ಯುದ್ದೀಕರಣದ ಜೋಡಿ ಮಾರ್ಗದ ನಿರ್ಮಾಣ ಕಾಮಗಾರಿಯು ಮಾರ್ಚ್ ವೇಳೆಗೆ ಮುಗಿಯುವ ನಿರೀಕ್ಷೆ ಇದೆ. ಇದು ಹಾಲಿ ರೈಲುಗಳ ವೇಗವನ್ನು ಹೆಚ್ಚಿಸಲು ಸಹಾಯಕವಾಗಲಿದೆ.

ಜೊತೆಗೆ, ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕೆಂಬ ಬೇಡಿಕೆಯನ್ನೂ ಸಚಿವರು ಮುಂದಿಟ್ಟರು. ಆದರೆ, ವಂದೇ ಭಾರತ್ ಕಾರ್ಯಸಾಧ್ಯವಲ್ಲ, ಬದಲಿಗೆ ವಂದೇ ಭಾರತ್ ಸ್ಲೀಪರ್ ಕೋಚ್ ಸೇವೆ ಆರಂಭಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದರು. ಈ ಸಲಹೆಯ ಆಧಾರದ ಮೇಲೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗುವುದು ಮತ್ತು ವಿ. ಸೋಮಣ್ಣ ಅವರೊಂದಿಗೆ ಸಭೆ ನಡೆಸಿ ಮನವಿ ಮಾಡುವುದಾಗಿ ಎಂ.ಬಿ. ಪಾಟೀಲ್ ತಿಳಿಸಿದರು.

error: Content is protected !!