January21, 2026
Wednesday, January 21, 2026
spot_img

ಸಂಸದರ ಜತೆ ಚರ್ಚಿಸದೆ ಸಭೆ ನಿಗದಿ: ಸಿಎಂ ನಿರ್ಧಾರಕ್ಕೆ ಪ್ರಹ್ಲಾದ್ ಜೋಶಿ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಡಿಸೆಂಬರ್ 8 ರಂದು ನವದೆಹಲಿಯಲ್ಲಿ ಕರೆದಿದ್ದ ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಸಭೆಗೆ, ಧಾರವಾಡ ಸಂಸದರೂ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಗೈರು ಹಾಜರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನ ಮತ್ತು ಪೂರ್ವ ನಿಗದಿತ ಕಾರ್ಯದೊತ್ತಡದ ಕಾರಣದಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲಾ ಕೇಂದ್ರ ಸಚಿವರು ಇದೇ ನಿಲುವನ್ನು ಪುನರುಚ್ಚರಿಸಿ ಸಿಎಂಗೆ ಮರುಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ, ಡಿಸೆಂಬರ್ 8 ರಂದು ನಿಗದಿಯಾದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ.

ಸಂಸತ್‌ನ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ, ಕೇಂದ್ರ ಸಚಿವರಿಗೆ ಇಲಾಖೆಗಳ ಕಾರ್ಯದೊತ್ತಡ ಮತ್ತು ಅಧಿವೇಶನದ ಕರ್ತವ್ಯಗಳು ಹೆಚ್ಚಿವೆ. ಅದೇ ದಿನ, ಹಣಕಾಸು ಇಲಾಖೆಗೆ ಸಂಬಂಧಿಸಿದ ಮಸೂದೆ ಮಂಡನೆ ಸಂಸತ್ತಿನಲ್ಲಿ ಪೂರ್ವ ನಿಯೋಜಿತವಾಗಿದೆ. ಹೊಸ ಮತ್ತು ನವೀಕೃತ ಇಂಧನ ಇಲಾಖೆ ಸಂಬಂಧ ಪ್ರಧಾನ ಮಂತ್ರಿಗಳ ವಿಶೇಷ ಸಭೆ ಡಿ.8ರಂದೇ ನಿಗದಿಯಾಗಿದೆ. “ವಂದೇ ಮಾತರಂ” ಗೀತೆಯ 150ನೇ ವರ್ಷಾಚರಣೆ ಕುರಿತು ಸಂಸತ್ತಿನಲ್ಲಿ ಚರ್ಚೆಯೂ ಅದೇ ದಿನ ಇರುವುದರಿಂದ, ಸಚಿವರು ಸಭೆಗೆ ಹಾಜರಾಗುವುದು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಸಕಾರಣ ನೀಡುವ ಜೊತೆಗೆ, ಸಚಿವರು ಸಿಎಂ ಸಿದ್ದರಾಮಯ್ಯ ಅವರ ಕಾರ್ಯವೈಖರಿಯ ಬಗ್ಗೆಯೂ ಸೂಕ್ಷ್ಮವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ತಾವು ಸಭೆ ನಿಗದಿಪಡಿಸುವ ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ದಿದ್ದರೆ ಅನುಕೂಲವಾಗುತ್ತಿತ್ತು” ಎಂದು ಪತ್ರದಲ್ಲಿ ಪ್ರಹ್ಲಾದ್ ಜೋಶಿ ಅವರು ತಿಳಿಸಿದ್ದಾರೆ.

ರಾಜ್ಯದ ಅಭಿವೃದ್ಧಿ ಉದ್ದೇಶದಿಂದ ಸಭೆ ಕರೆದಿದ್ದರೂ, ಸಂಸದರೊಂದಿಗೆ ಪೂರ್ವಭಾವಿಯಾಗಿ ಸಮಾಲೋಚಿಸದೆ ಮುಖ್ಯಮಂತ್ರಿಗಳು ದಿನಾಂಕ ನಿಗದಿಪಡಿಸಿರುವುದು ಸಚಿವರ ಪತ್ರದಿಂದ ಬಯಲಾಗಿದೆ.

Must Read