May 3, 2026
Sunday, May 3, 2026
spot_img

ಪಿಜಿ ಮಾಲೀಕರಿಗೂ ಹೊಡೆತ ಕೊಟ್ಟ ಎಲ್ ಪಿಜಿ: ಊಟದ ಮೆನುವಿನಲ್ಲಿ ಚೇಂಜ್!

ಹೊಸ ದಿಗಂತ ವರದಿ, ಚಿತ್ರದುರ್ಗ

ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅಡುಗೆ ಅನಿಲ ಹಾಗೂ ಅಡುಗೆ ಎಣ್ಣೆಯ ಬೆಲೆ ಏರಿಕೆಯಾಗಿದೆ. ದೇಶಾದ್ಯಂತ ಗ್ಯಾಸ್ ಸಮಸ್ಯೆ ಉಂಟಾಗಿದ್ದು, ಅದರಲ್ಲೂ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದರಿಂದಾಗಿ ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ. ಹೀಗಾಗಿ ಪಿಜಿಗಳಲ್ಲಿ ಊಟದ ಮೆನು ಚೇಂಜ್ ಮಾಡಲಾಗಿದೆ.

ಯುದ್ಧ ನಿಲ್ಲುವ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ನಿಂದ ಇಲ್ಲಿನ ಗ್ರಾಹಕರು ಕೂಡ ನಡುಗುವಂತೆ ಆಗಿದೆ. ಹಾಗಾಗಿ ಪೆಟ್ರೋಲ್, ಡಿಸೇಲ್ ದರವೂ ಏರಿಕೆಯಾಗುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಪೆಟ್ರೋಲ್ ಪ್ರತಿ ಲೀಟರ್‌ಗೆ ೨೨ ರೂಪಾಯಿ, ಡಿಸೇಲ್ ೨೪ ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, ಈ ಮೂಲಕ ಪೆಟ್ರೋಲ್ ದರ ೧೨೫ ರೂಪಾಯಿ, ಡಿಸೇಲ್ ದರ ೧೧೫ ರೂಪಾಯಿಗಳಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ.

ಎಲ್ಲಾ ಡಿಸ್ಟ್ರಿಬ್ಯೂಟರ್ಸ್‌ಗಳಿಗೂ ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಪತ್ರ ಬರೆದಿದೆ. ಆ ಪತ್ರದಲ್ಲಿ ದರ ಏರಿಕೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಹಾಗಾಗಿ ಯಾವುದೇ ಕ್ಷಣದಲ್ಲಾದರೂ ಇಂಧನ ದರ ಏರಿಕೆಯಾಗಬಹುದು ಎಂಬ ಮಾಹಿತಿಯನ್ನು ಆ ಪತ್ರದ ಮೂಲಕ ನೀಡಲಾಗಿದೆ.

ಮಧ್ಯ ಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್‌ನಿಮದಾಗಿ ದೇಶಾದ್ಯಂತ ಗ್ಯಾಸ್ ಸಿಲಿಂಡರ್‌ಗೆ ಆಹಾಕಾರ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್‌ಗೆ ೧೧೫ ರೂ. ಏರಿಕೆ ಆಗಿದ್ದು, ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಇತ್ತ ಜನಜೀವನದ ಮೇಲೂ ಯುದ್ಧದ ಪರಿಣಾಮ ಬೀರುತ್ತಿದೆ.

ಈಗಾಗಲೇ ಎಲ್‌ಪಿಜಿ ಸಿಲಿಂಡರ್ ದರ ೬೦ ರೂಪಾಯಿ, ಹಾಗೆ ವಾಣಿಜ್ಯ ಸಿಲಿಂಡರ್ ದರ ೧೧೫ ರೂಪಾಯಿ ಏರಿಕೆಯಾಗಿತ್ತು. ಪ್ರಸ್ತುತ ಸಿಲಿಂಡರ್‌ಗಳ ಕೊರತೆಯೂ ಕಾಡುತ್ತಿದೆ. ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮ ದೇಶದ ವಿವಿಧ ಕ್ಷೇತ್ರಗಳ ಮೇಲೆ ಉಂಟಾಗಿದೆ. ಇದರಿಂದಾಗಿ ನಿರುದ್ಯೋಗಿಗಳು, ಬಡವರು, ಮಧ್ಯಮ ವರ್ಗದವರು ಬೆಲೆ ಏರಿಕೆ ಬಿಸಿಯಿಂದ ಕಂಗಾಲಾಗುವಂತೆ ಮಾಡಿದೆ.

ಇನ್ನು ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಪಿಜಿ ಮಾಲೀಕರು ಅಡುಗೆ ಮಾಡುವುದಕ್ಕೂ ಚಿಂತಿಸುವಂತಾಗಿದೆ. ಇದರಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ.

ಇದರಿಂದಾಗಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ಏನು ಮಾಡಬೇಕೆಂಬುದನ್ನು ಯೋಚನೆ ಮಾಡಲಾಗುವುದು. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವಿಗೆ ಮುಂದಾಗಬೇಕು ಎಂದು ಪಿಜಿ ಮಾಲೀಕರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !