ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮಕ್ಕೆ ನಗರ ಸಜ್ಜಾಗುತ್ತಿರುವ ಹೊತ್ತಲ್ಲೇ, ಮಾದಕ ವಸ್ತು ದಂಧೆ ನಿಯಂತ್ರಣಕ್ಕೆ ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 18.75 ಕೋಟಿ ರೂಪಾಯಿ ಮೌಲ್ಯದ ವಿವಿಧ ಡ್ರಗ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಒಂದೇ ದಿನ ನಡೆದ ಐದು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹೈಡ್ರೋ ಗಾಂಜಾ, ಸಾಮಾನ್ಯ ಗಾಂಜಾ ಹಾಗೂ ಎಂಡಿಎಂಎ ಸೇರಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.
ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬ್ಯಾಂಕಾಕ್‌ನಿಂದ ವಿಮಾನದ ಮೂಲಕ ಸಾಗಿಸಲಾಗಿದ್ದ 18 ಕೆಜಿ 590 ಗ್ರಾಂ ಹೈಡ್ರೋ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯವನ್ನೇ 18.60 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸೇರಿ ಇಬ್ಬರು ಕೊರಿಯರ್ ಏಜೆಂಟ್‌ಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇನ್ನೊಂದು ಪ್ರಕರಣದಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸರು 8 ಕೆಜಿ 350 ಗ್ರಾಂ ಗಾಂಜಾದೊಂದಿಗೆ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇದರ ಮೌಲ್ಯ 8.35 ಲಕ್ಷ ರೂಪಾಯಿ. ಆರ್‌ಟಿ ನಗರ ಠಾಣೆ ವ್ಯಾಪ್ತಿಯಲ್ಲಿ ಐವರು ಆರೋಪಿಗಳಿಂದ 5 ಕೆಜಿ 437 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಜೆ.ಸಿ ನಗರದಲ್ಲಿ ವಿದೇಶಿ ಪ್ರಜೆಯಿಂದ 21 ಗ್ರಾಂ ಎಂಡಿಎಂಎ ಮತ್ತು ಮಲ್ಲೇಶ್ವರಂನಲ್ಲಿ 772 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

