Thursday, December 4, 2025

ಟೆಕ್ ದೈತ್ಯರ ಆಕರ್ಷಣೆಗೆ ರಾಜ್ಯದ ಮಹತ್ವದ ನಡೆ: ಐಸಿಇಎ ಜೊತೆ ಎಂ.ಬಿ.ಪಾಟೀಲ್ ಮಾತುಕತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕವನ್ನು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸದಲ್ಲಿ ಪ್ರಮುಖ ಕೇಂದ್ರವನ್ನಾಗಿ ಮಾಡುವ ಮಹತ್ವದ ಹೆಜ್ಜೆಯನ್ನು ರಾಜ್ಯ ಸರ್ಕಾರ ಇಟ್ಟಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ಕ್ಷೇತ್ರದಲ್ಲಿ 150 ಬಿಲಿಯನ್ ವಾರ್ಷಿಕ ವಹಿವಾಟು ಮತ್ತು ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದು ಸಮಗ್ರ ‘ವಿಷನ್ ಡಾಕ್ಯುಮೆಂಟ್’ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಕುರಿತು ಚರ್ಚಿಸಲು, ಸಚಿವರು ವಿಧಾನಸೌಧದ ಕಚೇರಿಯಲ್ಲಿ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ವಿಸ್ತೃತ ಸಭೆ ನಡೆಸಿದರು.

ಸಭೆಯ ನಂತರ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಏಪ್ರಿಲ್‌ನಲ್ಲಿ ಘೋಷಿಸಿರುವ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಗೆ ಸಮಾನಾಂತರವಾಗಿ ರಾಜ್ಯದಲ್ಲೂ ಒಂದು ವಿಶೇಷ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗುತ್ತಿದೆ. ಇದರ ಕಾರ್ಯಸಾಧ್ಯತೆಯ ಅಧ್ಯಯನ ನಡೆಯುತ್ತಿದ್ದು, ಪ್ರಸ್ತುತ ಇದು ಕರಡು ಹಂತದಲ್ಲಿದೆ. ಈ ಸಂದರ್ಭದಲ್ಲಿ ICEA ನೀಡುವ ಯಾವುದೇ ಸಲಹೆಗಳನ್ನು ಸರ್ಕಾರ ಸ್ವಾಗತಿಸಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೇವಲ ಮೊಬೈಲ್ ಫೋನ್ ಬಿಡಿಭಾಗಗಳು ಮಾತ್ರವಲ್ಲದೆ, ಕೈಗಾರಿಕಾ ಎಲೆಕ್ಟ್ರಾನಿಕ್ಸ್ ಮತ್ತು ಕಾರ್ಯತಂತ್ರದ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲೂ ಅಪಾರ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆ ಹಾಗೂ ಇತರ ರಾಜ್ಯಗಳಲ್ಲಿ ಇರುವ ಇಂತಹ ಯೋಜನೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

error: Content is protected !!