ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ: ನಾವು ಇಲ್ಲಿ ಧರ್ಮ ಆಧಾರಿತ, ಜಾತಿ ಆಧಾರಿತ ಸಮ್ಮೇಳನ ಮಾಡುತ್ತಿಲ್ಲ. ನಾವು ಅಪ್ಪಟ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಶಿ ಸ್ಪಷ್ಟಪಡಿಸಿದರು.
ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಗೋಷ್ಠಿಗಳಲ್ಲಿ ಮುಸ್ಲಿಂರಿಗೆ ಆದ್ಯತೆ ನೀಡಲಾಗಿಲ್ಲ ಎಂದು ಬಿ.ಕೆ. ಹರಿಪ್ರಸಾದ ಅವರ ಆರೋಪಕ್ಕೆ ನಾನು ಮಾತನಾಡಬೇಕಿದ್ದು, ಇದಕ್ಕೆ ನಾನು ಮಾತನಾಡದೆ ಹೋದರೆ, ಅವರ ಮಾತಿಗೆ ಪುಷ್ಠಿ ನೀಡಿದಂತಾಗುತ್ತದೆ ಎಂದರು.
ಸಂತ ಶಿಶುನಾಳ ಶರೀಫ್, ಕನಕ, ನಾಡಲ್ಲಿ ಕನ್ನಡ ಸಾಹಿತ್ಯ ಪರಿಷತ್ ಈ ತಾರತಮ್ಯ ಮಾಡಲು ಸಾಧ್ಯವಿಲ್ಲ. ಸಮ್ಮೇಳನದಲ್ಲಿ 11 ಮಂದಿ ಮುಸ್ಲಿಂರಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ಇಬ್ಬರು ಮುಸ್ಲಿಂ ಬಾಂಧವರನ್ನು ಸನ್ಮಾನಿಸಲಾಗಿದೆ. ಹೀಗಾಗಿ ನಾವು ಜಾತಿ, ಮತವನ್ನು ಬಿಟ್ಟು ಮೊದಲು ಕನ್ನಡಿಗರಾಗಬೇಕು. ಈ ಟೀಕೆ, ಟಿಪ್ಪಣಿಗೆ ನಾನು ಪೂರ್ಣ ವಿರಾಮ ಮಾಡುವೆ ಎಂದರು.
ಹಾವೇರಿಯಲ್ಲಿ ನಡೆದ ಈ ಸಮ್ಮೇಳನ ಅತ್ಯಂತ ಯಶಸ್ವಿ ಹಾಗೂ ದಾಖಲೆ ಸೃಷ್ಟಿಮಾಡಿದೆ. ಈ ಸಮ್ಮೇಳನದ ಯಶಸ್ವಿಗೆ ನಾಡಿನ ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾಡಳಿತ ನಿರಂತರ ಪರಿಶ್ರಮವೇ ಕಾರಣ ಎಂದರು.
ಈ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಅಳವಡಿಸಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕನ್ನಡ ನಾಡಿನ ಮುಖ್ಯಮಂತ್ರಿಗಳಾಗಿದ್ದು, ಅವರಿಗೆ ಸಲ್ಲಿಸಿರುವ ಗೌರವವಾಗಿದೆ ಎಂದರು.
ಈ ಸಮ್ಮೇಳನದ ಪೂರ್ವ ಸಿದ್ಧತೆ ವೇಳೆ ನೂರಾರು ಸವಾಲು, ಸಂಕಟಗಳನ್ನು ಎದುರಿಸಲಾಗಿದೆ. ಈ ಅಭೂತಪೂರ್ವ ಯಶಸ್ಸಿನ ಎದುರು ಅವೆಲ್ಲ ಈಗ ನಗಣ್ಯ. ಸಂತ ಶಿಶುನಾಳ ಶರೀಫ್ರ ನಾಡಲ್ಲಿ ನಡೆದ ಇಂಥ ಸಾಹಿತ್ಯ ಸಮ್ಮೇಳನ ಈ ಹಿಂದೆ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.