ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಚೇತರಿಕೆಯಾಗುತ್ತಿದ್ದಾರೆ.
ಮುಂಬೈನ ಕೋಕಿಲಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಂದಿನ 6 ತಿಂಗಳುಗಳ ಕಾಲ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ
ಹೀಗಾಗಿ ಈ ಬಾರಿಯ ಐಪಿಎಲ್ ಸೀಸನ್ 16 ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಹೊರಗುಳಿಯುವುದು ಖಚಿತವಾಗಿದೆ.
ಇತ್ತ ಬಿಸಿಸಿಐ ರಿಷಭ್ ಪಂತ್ ವೈದ್ಯಕೀಯ ವೆಚ್ಚಗಳನ್ನು ಭರಿಸುವುದಾಗಿ ಹೇಳಿಕೊಂಡಿದೆ. ಅಷ್ಟೇ ಅಲ್ಲದೆ ಈ ಹಿಂದಿನ ಒಪ್ಪಂದಂತೆ ಅವರಿಗೆ ನೀಡಬೇಕಾದ ಮೊತ್ತವನ್ನೂ ಕೂಡ ಬಿಸಿಸಿಐ ನೀಡಲಿದೆ.
ಇದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿರುವ ರಿಷಭ್ ಪಂತ್ ಕಳೆದ ಬಾರಿಯ ಒಪ್ಪಂದಂತೆ ಈ ಸಲ ಐಪಿಎಲ್ ಫ್ರಾಂಚೈಸಿಯಿಂದ 16 ಕೋಟಿ ರೂ. ಪಡೆಯಬೇಕಿತ್ತು. ಇದೀಗ ಈ ಮೊತ್ತವನ್ನು ಬಿಸಿಸಿಐ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಆಟಗಾರರ ಗುತ್ತಿಗೆಯಿಂದ ನೀಡಲಾಗುವ 5 ಕೋಟಿ ರೂ. ಅನ್ನು ಸಹ ಬಿಸಿಸಿಐ ಪಾವತಿಸಲಿದೆ ಎಂದು ವರದಿಯಾಗಿದೆ.
ಅಂದರೆ ಐಪಿಎಲ್ ಹಾಗೂ ಬಿಸಿಸಿಐ ಒಪ್ಪಂದ ಪ್ರಕಾರ ಈ ವರ್ಷ ರಿಷಭ್ ಪಂತ್ ಪಡೆಯಬೇಕಿದ್ದ ಸಂಪೂರ್ಣ ಮೊತ್ತವನ್ನು ಬಿಸಿಸಿಐ ಪಾವತಿಸಲಿದೆ. ಅದರಂತೆ ಈ ವರ್ಷ ರಿಷಭ್ ಪಂತ್ ಒಟ್ಟು 21 ಕೋಟಿ ರೂ. ಪಡೆಯಲಿದ್ದಾರೆ.
ಬಿಸಿಸಿಐ ನಿಯಮಗಳ ಪ್ರಕಾರ, ಆಟಗಾರರು ಗಾಯಗೊಂಡು ಐಪಿಎಲ್ನಿಂದ ಹಿಂದೆ ಸರಿದರೆ, ಆ ಮೊತ್ತವನ್ನು ವಿಮಾ ಕಂಪೆನಿಯು ನೀಡಬೇಕಾಗುತ್ತದೆ. ಇದೀಗ ವಿಮಾ ಪರಿಹಾರ ಮೊತ್ತದಿಂದ ರಿಷಭ್ ಪಂತ್ಗೆ ಈ ವರ್ಷ ಸಿಗಬೇಕಿರುವ ಸಂಪೂರ್ಣ ಮೊತ್ತ ಪಾವತಿಸಲು ಬಿಸಿಸಿಐ ಮುಂದಾಗಿದೆ.
ಸದ್ಯ ಚಿಕಿತ್ಸೆಯಲ್ಲಿರುವ ರಿಷಭ್ ಪಂತ್ ಶುಕ್ರವಾರ ಸಂಜೆ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದಾಗ್ಯೂ ಅವರು ಮುಂದಿನ 6 ತಿಂಗಳುಗಳ ಕಾಲ ಮೈದಾನಕ್ಕಿಳಿಯಲಾಗುವುದಿಲ್ಲ ಎಂದು ತಿಳಿದು ಬಂದಿದೆ.