ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದ್ದು,ಏಕಾಏಕಿ ಗೋಧಿಹಿಟ್ಟು ಕೊರತೆ ಕಾಣಿಸಿಕೊಂಡಿದ್ದು ನಿತ್ಯ ಬಳಕೆಯ ಆಹಾರ ಸಿದ್ಧಪಡಿಸುವುದು ಕಷ್ಟವಾಗಿದೆ.
ಖೈಬರ್ ಪಖ್ತುನ್ವಾ, ಸಿಂಧ್ ಮತ್ತು ಬಲೂಚಿಸ್ತಾನದಲ್ಲಿ ಗೋಧಿಹಿಟ್ಟಿಗಾಗಿ ಜನರು ಅಂಗಡಿಗಳ ಮುಂದೆ ಮುಗಿಬಿದ್ದಾಗ ಕಾಲ್ತುಳಿತಗಳು ಸಂಭವಿಸಿವೆ. ಗೋಧಿಹಿಟ್ಟು ಹಂಚಿಕೆ, ಮಾರಾಟದ ಮೇಲೆ ಪ್ರಸ್ತುತ ಪಾಕಿಸ್ತಾನದಲ್ಲಿ ಮಿತಿ ಹೇರಲಾಗಿದೆ. ರಿಯಾಯ್ತಿ ದರದಲ್ಲಿ ಅಲ್ಲಿನ ಸರ್ಕಾರವೇ ಗೋಧಿಹಿಟ್ಟು ವಿತರಣೆ ಮಾಡುತ್ತಿದ್ದು, ಪ್ರತಿದಿನ ಅಂಗಡಿಗಳ ಮುಂದೆ ಕಾದು ನಿಲ್ಲುವುದು ಲಕ್ಷಾಂತರ ಜನರ ನಿತ್ಯದ ಕಾಯಕವಾಗಿದೆ.
ಗೋಧಿಹಿಟ್ಟಿಗಾಗಿ ಮಿನಿ ಟ್ರಕ್ ಬಂದಾಗ ಜನರು ಹತ್ತಿರಕ್ಕೆ ಓಡಿ, ನೂಕಾಟ-ತಳ್ಳಾಟ ನಡೆಸುತ್ತಿದ್ದಾರೆ. ಹೀಗಾಗಿ ಶಸ್ತ್ರಸಜ್ಜಿತ ಗಾರ್ಡ್ಗಳ ರಕ್ಷಣೆ ಒದಗಿಸಲಾಗಿದೆ.
ಗೋಧಿಹಿಟ್ಟು ಮಾರಾಟಗಾರರ ಮೇಲೆ ಹಲ್ಲೆಗಳು ನಡೆದ ಹಲವು ಪ್ರಕರಣಗಳು ವರದಿಯಾಗಿವೆ. ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಎನಿಸಿದ ಕರಾಚಿ ನಗರದಲ್ಲಿ ಒಂದು ಕೆಜಿ ಗೋಧಿಹಿಟ್ಟು 140ರಿಂದ 160 ರೂಪಾಯಿಗೆ (ಪಾಕಿಸ್ತಾನದ ಕರೆನ್ಸಿ) ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಷಾವರ ನಗರಗಳಲ್ಲಿ ಗೋಧಿಹಿಟ್ಟಿನ ಬೆಲೆಯು 1,50 ರೂಪಾಯಿ ಮುಟ್ಟಿದೆ.
ಬಲೂಚಿಸ್ತಾನದಲ್ಲಿ ಗೋಧಿಯ ದಾಸ್ತಾನು ಸಂಪೂರ್ಣ ಖಾಲಿಯಾಗಿದೆ. ತಕ್ಷಣಕ್ಕೆ 4 ಲಕ್ಷ ಚೀಲಗಳಷ್ಟು ಗೋಧಿ ಬೇಕಿದೆ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಷಮಿಸಬಹುದು’ ಎಂದು ಬಲೂಚಿಸ್ತಾನ್ ಪ್ರಾಂತ್ಯದ ಆಹಾರ ಸಚಿವ ಝಮಾರಕ್ ಅಚಕ್ಝೈ ಹೇಳಿದ್ದಾರೆ.
ಖೈಬರ್-ಪಂಖ್ತುನ್ವಾದಲ್ಲಿಯೂ ಪರಿಸ್ಥಿತಿ ಹದೆಗೆಟ್ಟಿದ್ದು, 20 ಕೆಜಿ ತೂಗುವ ಒಂದು ಗೋಧಿ ಚೀಲವನ್ನು 3,100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಗೋಧಿಯ ಕಳ್ಳದಾಸ್ತಾನು, ಅಕ್ರಮ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರವಾಹದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ದೇಶದಲ್ಲಿ ಹೊಸದಾಗಿ ಎದುರಾಗಿರುವ ಗೋಧಿ ಬಿಕ್ಕಟ್ಟಿನಿಂದ ಜನರು ಹೈರಾಣಾಗಿದ್ದಾರೆ. ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ. ಒಬ್ಬ ವ್ಯಕ್ತಿಯು ವಾರದಲ್ಲಿ ಒಮ್ಮೆ ಮಾತ್ರ ಗೋಧಿಹಿಟ್ಟು ಖರೀದಿಸಬಹುದು ಎಂಬ ನಿಯಮವನ್ನು ಇದೀಗ ಪಾಕಿಸ್ತಾನದಲ್ಲಿ ಜಾರಿಗೊಳಿಸಲಾಗಿದೆ. ಗೋಧಿಹಿಟ್ಟಿನ ಬೆಲೆಯು ಹೆಚ್ಚಳವಾಗಿರುವುದರಿಂದ ಚಪಾತಿ, ರೊಟ್ಟಿ ಮತ್ತು ಬೇಕರಿ ಉತ್ಪನ್ನಗಳ ಬೆಲೆಗಳೂ ಹೆಚ್ಚಾಗಿವೆ.