ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರ್ತಡೇ ಪಾರ್ಟಿಯಲ್ಲಿ ವ್ಯಕ್ತಿಯೊಬ್ಬ ಯುವಕನ ಮುಖಕ್ಕೆ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ನಡೆದಿದೆ. ದೆಹಲಿಯ ಫತೇಪುರ್ ಬೇರಿಯ ಜೋನಾಪುರ ಗ್ರಾಮದಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸುತ್ತಿದ್ದ ವೇಳೆ ಕೆಲ ಯುವಕರು ಕೂಡಾ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆ ವೇಳೆ ಮತ್ತೊಬ್ಬ ವ್ಯಕ್ತಿ ಪ್ರಮೋದ್ ಮುಖಕ್ಕೆ ಗುಂಡು ಹಾರಿಸಿದ್ದಾನೆ.
ಕೂಡಲೇ ಪ್ರಮೋದ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಾಂಪಾಲ್ ಎಂಬ ವ್ಯಕ್ತಿ ಬಂದೂಕಿನಿಂದ ಪ್ರಮೋದ್ ಕಡೆಗೆ 7-8 ಸುತ್ತು ಗುಂಡು ಹಾರಿಸಿದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ‘‘ಹುಟ್ಟುಹಬ್ಬದ ಆಚರಣೆ ನಡೆಯುತ್ತಿದ್ದಾಗ ರಾಂಪಾಲ್ ಎಂಬ ವ್ಯಕ್ತಿ 7-8 ಜನರೊಂದಿಗೆ ಅಲ್ಲಿಗೆ ಬಂದಿದ್ದು, ಟೆರೇಸ್ ಮೇಲೆ ಹೋಗಿ ಪ್ರಮೋದ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪ್ರಮೋದ್ ಸಹೋದರ ವಿನೋದ್ ಹೇಳಿದ್ದಾರೆ.
ಗುಂಡು ಹಾರಿಸಬೇಡಿ ಎಂದು ಪ್ರಮೋದ್ ಹೇಳಿದರೂ ಕೇಳದೆ, ರಾಂಪಾಲ್ ಟೆರೇಸ್ ನಿಂದ ಕೆಳಗಿಳಿದಾಗ ಮತ್ತೊಮ್ಮೆ ಗುಂಡು ಹಾರಿಸಿದ್ದು, ಪ್ರಮೋದ್ ಮುಖಕ್ಕೆ ಗುಂಡು ತಗುಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಪೂರ್ಣ ವಿವರ ಪಡೆಯುತ್ತಿದ್ದಾರೆ. ಪ್ರಮೋದ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ.