ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ವಿಮಾನ ದುರಂತದಲ್ಲಿ 68 ಪ್ರಯಾಣಿಕರು ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಮಂದಿಯೂ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ಕ್ಷಣದಿಂದಲೇ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, ಇದುವರೆಗೆ 68 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ನಾಲ್ಕು ಮೃತದೇಹಗಳನ್ನು ಹೊರತೆಗೆಯುವ ಪ್ರಯತ್ನ ಮುಂದುವರಿದಿದೆ.
ಆದ್ರೆ ಮೃತದೇಹಗಳನ್ನು ಹೊರತೆಗೆಯಲಾಗಿದೆಯಷ್ಟೇ ಹೊರತು ಮೃತದೇಹಗಳನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಭಾರತದ ನೇಪಾಳ ರಾಯಭಾರಿ ಶಂಕರ್ ಪಿ ಶರ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನೇಪಾಳ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಲ್ಕು ರಷ್ಯನ್ನರು, ಇಬ್ಬರು ಕೊರಿಯನ್ನರು ಮತ್ತು ಐರ್ಲೆಂಡ್, ಅರ್ಜೆಂಟೀನಾ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ತಲಾ ಒಬ್ಬರು ಸೇರಿದಂತೆ ವಿಮಾನದಲ್ಲಿದ್ದ 15 ವಿದೇಶಿಯರಲ್ಲಿ ಐವರು ಭಾರತೀಯರು ಸೇರಿದ್ದಾರೆ. ಯೇತಿ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಅವಳಿ ಇಂಜಿನ್ ಎಟಿಆರ್ 72 ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಹೊರಟಿತ್ತು.