ಹೊಸದಿಗಂತ ವರದಿ ಮಡಿಕೇರಿ :
ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ವೀರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳಾದ ಯೇಸುದಾಸ್ ಹಾಗೂ ತಾರಾ ದಂಪತಿಯ ಪುತ್ರ ರಕ್ಷಿತ್ ಎಂಬವರ ಪತ್ನಿ ಕಾವ್ಯ (23) ಎಂಬಾಕೆಯೇ ಅನುಮಾನಾಸ್ಪದವಾಗಿ ಸಾವಿಗೀಡಾದ ಮಹಿಳೆಯಾಗಿರುತ್ತಾಳೆ.
ಸೋಮವಾರ ಸಂಜೆ ರಕ್ಷಿತ್ ಎಂದಿನಂತೆ ಕೆಲಸ ಮುಗಿಸಿ ಮನೆಗೆ ಬಂದಾಗ ಕಾವ್ಯ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ರಕ್ಷಿತ್ ಹಾಗೂ ಕಾವ್ಯ ನಾಲ್ಕು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದು, ಮೃತಳ ತಂದೆ ವಂಸತ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.