ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಭಾರತದಾದ್ಯಂತ ಇಂಡಿಗೋ ವಿಮಾನಗಳ ರದ್ದತಿಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುವಂತಾಗಿದೆ. ವಿಮಾನಗಳು ರದ್ದಾಗುತ್ತಿರುವುದರಿಂದ ಸಿಬ್ಬಂದಿಗಳ ಮೇಲೆ ಪ್ರಯಾಣಿಕರ ಆಕ್ರೋಶ ಹೆಚ್ಚುತ್ತಿದ್ದು, ಈ ಬಿಕ್ಕಟ್ಟು ಈಗ ಕ್ರೀಡಾ ವಲಯಕ್ಕೂ ವಕ್ಕರಿಸಿದೆ.
ಹೌದು, ಇಂಡಿಗೋ ವಿಮಾನಗಳ ಬಿಕ್ಕಟ್ಟಿನ ಕಾರಣದಿಂದಾಗಿ ಬಿಸಿಸಿಐ ಒಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ದೇಶೀಯ ಟಿ20 ಕ್ರಿಕೆಟ್ ಪಂದ್ಯಾವಳಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಸುತ್ತಿನ ಪಂದ್ಯಗಳ ಸ್ಥಳವನ್ನು ಬದಲಾಯಿಸಲಾಗಿದೆ.
ಮೂಲತಃ ಈ ಮಹತ್ವದ ಪಂದ್ಯಗಳು ಡಿಸೆಂಬರ್ 12 ರಿಂದ 18 ರವರೆಗೆ ಇಂದೋರ್‌ನಲ್ಲಿರುವ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣ ಮತ್ತು ಎಮರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆಯಬೇಕಿತ್ತು. ಆದರೆ, ವಿಮಾನಯಾನದ ಸಮಸ್ಯೆಯಿಂದಾಗಿ, ಸೂಪರ್ ಲೀಗ್ ಮತ್ತು ಫೈನಲ್ ಸೇರಿದಂತೆ ಕೊನೆಯ 12 ಪಂದ್ಯಗಳನ್ನು ಈಗ ಪುಣೆಗೆ ಸ್ಥಳಾಂತರಿಸಲಾಗಿದೆ.
ಇನ್ನು ಮುಂದೆ ನಾಕೌಟ್ ಪಂದ್ಯಗಳು ಪುಣೆಯ MCA ಕ್ರೀಡಾಂಗಣ ಮತ್ತು DY ಪಾಟೀಲ್ ಅಕಾಡೆಮಿ ಮೈದಾನದಲ್ಲಿ ಜರುಗಲಿವೆ.
ಈ ಸ್ಥಳಾಂತರಕ್ಕೆ ಇಂಡಿಗೋ ವಿಮಾನ ಬಿಕ್ಕಟ್ಟು ಮಾತ್ರವಲ್ಲದೆ ಮತ್ತೊಂದು ಪ್ರಮುಖ ಕಾರಣವಿದೆ. ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಸಿಇಒ ರೋಹಿತ್ ಪಂಡಿತ್ ಅವರು ಇದನ್ನು ದೃಢಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಡಿಸೆಂಬರ್ 9 ರಿಂದ 12 ರವರೆಗೆ ಇಂದೋರ್‌ನಲ್ಲಿ ವಿಶ್ವ ವೈದ್ಯರ ಸಮ್ಮೇಳನ ನಡೆಯಲಿದೆ. ಈ ಕಾರಣದಿಂದಾಗಿ ತಂಡಗಳು ಮತ್ತು ಅಧಿಕಾರಿಗಳಿಗೆ ಅಲ್ಲಿ ಹೋಟೆಲ್ ಕೊಠಡಿಗಳು ಸಿಗುತ್ತಿಲ್ಲ.
ವಿಮಾನಗಳ ಅಭಾವ ಮತ್ತು ಹೋಟೆಲ್ ಕೊಠಡಿಗಳ ಲಭ್ಯತೆಯ ಕೊರತೆ- ಈ ಎರಡೂ ಕಾರಣಗಳಿಂದಾಗಿ ಬಿಸಿಸಿಐ ಸ್ಥಳ ಬದಲಾವಣೆಯ ನಿರ್ಧಾರ ಕೈಗೊಂಡಿದೆ.
ಈ ಸ್ಥಳಾಂತರವು ಬಿಸಿಸಿಐಗೆ ದೊಡ್ಡ ಸವಾಲನ್ನು ತಂದೊಡ್ಡಿದೆ. ಅಹಮದಾಬಾದ್, ಕೋಲ್ಕತ್ತಾ, ಲಕ್ನೋ ಮತ್ತು ಹೈದರಾಬಾದ್‌ನಂತಹ ಗುಂಪು ಹಂತದ ಸ್ಥಳಗಳಿಂದ ಆಟಗಾರರು, ತರಬೇತುದಾರರು, ಅಂಪೈರ್‌ಗಳು ಮತ್ತು ಅಧಿಕಾರಿಗಳನ್ನು ವಿಮಾನಯಾನದ ಬಿಕ್ಕಟ್ಟಿನ ನಡುವೆ ಪುಣೆಗೆ ಕರೆತರುವುದು ಕಷ್ಟಕರವಾಗಿದೆ. ಅಲ್ಲದೆ, ಮಹಿಳಾ ಅಂಡರ್-23 ಟಿ20 ಟ್ರೋಫಿ ಮತ್ತು ಪುರುಷರ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಂತಹ ಇತರೆ ದೇಶೀಯ ಪಂದ್ಯಾವಳಿಗಳೂ ನಡೆಯುತ್ತಿದ್ದು, ಪ್ರಯಾಣದ ವ್ಯವಸ್ಥೆ ಮಾಡುವುದು ದೊಡ್ಡ ತಲೆನೋವಾಗಿದೆ.
ಇಂಡಿಗೋ ಬಿಕ್ಕಟ್ಟು ಮುಂದುವರಿದರೆ, ಈ ಎಲ್ಲ ವ್ಯವಸ್ಥಾಪನಾ ಸವಾಲುಗಳನ್ನು ಬಿಸಿಸಿಐ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

