ಕಂದಾಯ ಗ್ರಾಮಗಳಾದ ತಾಂಡಾಗಳು ಶೀಘ್ರ ಗುಡಿಸಲು ಮುಕ್ತ: ನರೇಂದ್ರ ಮೋದಿ

ಹೊಸ ದಿಗಂತ ವರದಿ, ಕಲಬುರಗಿ:

ಕಂದಾಯ ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ, ಹಟ್ಟಿ, ಹಾಡಿ ಮುಂತಾದ ಜನವಸತಿ ಪ್ರದೇಶಗಳನ್ನು ಸರ್ಕಾರದ ಯೋಜನೆಗಳಡಿ ಗುಡಿಸಲು ಮುಕ್ತ ಗ್ರಾಮಗಳನ್ನಾಗಿ ನಿರ್ಮಿಸಿ, ಇಲ್ಲಿನ ಜನರಿಗೆ ಪಕ್ಕಾ ಮನೆ, ಶೌಚಾಲಯ, ವಿದ್ಯುತ್ ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ, ಕಂದಾಯ ಇಲಾಖೆ ವತಿಯಿಂದ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಗಳ 342 ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ಗ್ರಾಮಗಳ 52,072 ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ನಿಟ್ಟಿನಲ್ಲಿ ಹಕ್ಕು ಪತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಲಂಬಾಣಿ ಭಾಷೆಯಲ್ಲಿಯೇ ತಮ್ಮ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿಯವರು, ‘ಕರ್ನಾಟಕ ತಾಂಡೇರ್ ಮಾರ್ ಗೋರ್ ಬಂಜಾರ ಭಾಯಿ-ಬಿಯಾ, ನಾಯ್ಕ, ಕಾರಬಾರಿ, ಹಾತ್ ಜೋಡೇನ್ ರಾಮ್ ರಾಮ್, ಜೈ ಸೇವಾ ಲಾಲ್ ಮಹಾರಾಜ್’ ಎನ್ನುತ್ತಿದ್ದಂತೆಯೇ ಸಮಾರಂಭದಲ್ಲಿ ನೆರೆದಿದ್ದ ಲಂಬಾಣಿ ಸಮುದಾಯ ಚಪ್ಪಾಳೆ ತಟ್ಟಿ ಸಂಭ್ರಮಿಸಿದಲ್ಲದೆ ಮೋದಿ ಮೋದಿ ಎಂದು ಕೂಗಿದರು. ಬಳಿಕ ಕನ್ನಡದಲ್ಲಿ ಮಾತನಾಡಿದ ಪ್ರಧಾನಿಗಳು, ಕಲಬುರಗಿಯ ಶ್ರೀ ಶರಣಬಸವೇಶ್ವರ ಮತ್ತು ಗಾಣಗಾಪೂರದ ಗುರು ದತ್ತಾತ್ರೇಯ ಅವರಿಗೆ ವಂದನೆ, ಪ್ರಖ್ಯಾತ ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಗೆ ಮತ್ತು ಕನ್ನಡ ನಾಡಿನ ಸಮಸ್ತ ಜನರಿಗೆ ನಮಸ್ಕಾರಗಳು ಎಂಬುದಾಗಿ ಹೇಳುತ್ತಿದ್ದಂತೆಯೇ ಜನರ ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತು.

ಜನವರಿ ಮಾಸವು ನಮಗೆಲ್ಲ ಅತ್ಯಂತ ಮಹತ್ವದ್ದಾಗಿದ್ದು, ಇದೇ ತಿಂಗಳಿನಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು. ಇಂತಹ ಪವಿತ್ರ ತಿಂಗಳಿನಲ್ಲಿಯೇ ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ, ಅಲೆಮಾರಿ ಜನಾಂಗದವರಿಗೆ ಹಕ್ಕು ಪತ್ರ ನೀಡುವ ಮೂಲಕ ಬಹುದೊಡ್ಡ ಹೆಜ್ಜೆ ಇರಿಸಿದೆ. ಇದು ಬಂಜಾರ ಸಮುದಾಯದ ಲಕ್ಷಾಂತರ ಜನಕ್ಕೆ ಅತಿದೊಡ್ಡ ದಿನವಾಗಿದ್ದು, ರಾಜ್ಯದ ತಾಂಡಾಗಳಲ್ಲಿನ ಸಾವಿರಾರು ಕುಟುಂಬಗಳ ಉಜ್ವಲ ಭವಿಷ್ಯವನ್ನು ಸುನಿಶ್ಚಿತಗೊಳಿಸಿದೆ. 1993 ರಲ್ಲಿಯೇ ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಸಾಕಾರಗೊಳಿಸಲು ನಮ್ಮ ಸರ್ಕಾರವೇ ಬರಬೇಕಾಯಿತು ಎಂದು ಹೇಳಿದ ಅವರು, ಬಂಜಾರ ಸಮುದಾಯದ ಲಕ್ಷಾಂತರ ತಾಯಿ, ತಂದೆಯರು ತಮ್ಮ ಸಾಂಪ್ರಾದಾಯಿಕ ಉಡುಪಿನೊಂದಿಗೆ ಆಗಮಿಸಿ, ನನ್ನನ್ನು ಆಶೀರ್ವದಿಸಿರುವುದನ್ನು ನಾನೆಂದೂ ಮರೆಯುವುದಿಲ್ಲ ಎಂದರು. ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಮಳೆ ಕಡಿಮೆ, ನೀರಿನ ಕೊರತೆ ಇದ್ದರೂ, ಇಂತಹ ಅನೇಕ ಕಡೆ ಅಲ್ಲಲ್ಲಿ ಸಿಗುವ ನೀರಿನ ತಾಣಗಳನ್ನು ಯಾರು ನಿರ್ಮಿಸಿದ್ದಾರೆ ಎಂದು ಪ್ರಶ್ನಿಸಿದರೆ, ಅಲ್ಲಿನ ಜನರಿಂದ ಬರುವ ಉತ್ತರ ‘ಲಾಖಾ ಬಂಜಾರ’ ಎಂದೇ ಆಗಿರುತ್ತದೆ. ಹೀಗೆ ಬಂಜಾರ ಸಮುದಾಯದ ಕಾಣಿಕೆ ಈ ನಾಡಿಗೆ ಬಹುದೊಡ್ಡದು ಎಂದು ಬಣ್ಣಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!