ಹೊಸದಿಗಂತ ಡಿಜಿಟಲ್ ಡೆಸ್ಕ್ :
‘ಪರೀಕ್ಷಾ ಪೇ ಚರ್ಚಾ’ ಇದು ನನ್ನ ಪರೀಕ್ಷೆಯೂ ಹೌದು ಮತ್ತು ದೇಶದ ಕೋಟ್ಯಂತರ ವಿದ್ಯಾರ್ಥಿಗಳು ನನ್ನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಪರೀಕ್ಷೆಯನ್ನು ನೀಡುವುದನ್ನು ನಾನು ಆನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ʼಪರೀಕ್ಷಾ ಪೆ ಚರ್ಚಾ’ 2023ರ 6ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಪೋಷಕರು ತಮ್ಮ ಮಕ್ಕಳಿಂದ ನಿರೀಕ್ಷಿಸುವ ನಿರೀಕ್ಷೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕುಟುಂಬಗಳು ತಮ್ಮ ಮಕ್ಕಳಿಂದ ನಿರೀಕ್ಷಿಸುವುದು ಸಹಜ ಆದರೆ ಅದು ಕೇವಲ ‘ಸಾಮಾಜಿಕ ಸ್ಥಾನಮಾನ’ ಕಾಪಾಡುವ ಸಲುವಾಗಿ ಇದ್ದರೆ ಅದು ಅಪಾಯಕಾರಿ ಎಂದು ಹೇಳಿದರು.
“ಒಂದು ಕುಟುಂಬದ ನಿರೀಕ್ಷೆಯು ಮಕ್ಕಳಿಗೆ ಸಾಮಾಜಿಕ ಒತ್ತಡಕ್ಕೆ ಕಾರಣವಾಗಿದ್ದರೆ ಅದು ಸಮಸ್ಯೆಯಾಗಿದೆ. ನಾವು ರಾಜಕೀಯದಲ್ಲಿ ಗೆಲುವಿಗಾಗಿ ಭಾರಿ ಒತ್ತಡವನ್ನು ಸೃಷ್ಟಿಸುತ್ತೇವೆ, ನೀವು ಸಾಮರ್ಥ್ಯದೊಂದಿಗೆ ನಿರೀಕ್ಷೆಗಳನ್ನು ಹೊಂದಿಸಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.
ಮಕ್ಕಳು ಚಿಂತಿಸಬೇಡಿ ಆದರೆ ತಮ್ಮ ಪರೀಕ್ಷೆಯ ದಿನಗಳಲ್ಲಿ ಒತ್ತಡ ಮುಕ್ತ ಮತ್ತು ಹರ್ಷಚಿತ್ತದಿಂದ ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಶ್ರಮಿಸಬೇಕು ಎಂದು ಅವರು ಮಕ್ಕಳನ್ನು ಒತ್ತಾಯಿಸಿದರು.
“ನೀವು ಉತ್ತಮವಾಗಿ ಮಾಡಿದರೆ, ನಿಮ್ಮ ಸುತ್ತಮುತ್ತಲಿನವರಿಂದ ಒತ್ತಡ ಕಡಿಮೆಯಿರಲಿದೆ. ನಿಮ್ಮಂತೆಯೇ ನಮ್ಮ ರಾಜಕೀಯ ಜೀವನದಲ್ಲಿ ಕೂಡ ಅನುಭವಿಸಿದ್ದೇವೆ. ಆದ್ದರಿಂದ ಚಿಂತಿಸಬೇಡಿ, ಒತ್ತಡ ಮುಕ್ತ ಮತ್ತು ಹರ್ಷಚಿತ್ತದಿಂದ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಲು ಶ್ರಮಿಸಿ” ಎಂದು ಪ್ರಧಾನಿ ಮೋದಿ ಹೇಳಿದರು.
ಸಮಯ ನಿರ್ವಹಣೆ ಸಮಸ್ಯೆಯನ್ನು ಉದ್ದೇಶಿಸಿ, ಪಿಎಂ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಯು ಮೊದಲು ಕಡಿಮೆ ಇಷ್ಟಪಡುವ ವಿಷಯಕ್ಕೆ ಸಮಯವನ್ನು ನೀಡಿ ಮತ್ತು ಉಳಿದ ಸಮಯವನ್ನು ಹೆಚ್ಚು ಇಷ್ಟಪಟ್ಟ ವಿಷಯಕ್ಕೆ ನೀಡಬೇಕು ಎಂದರು.
“ನಿಮ್ಮ ತಾಯಿಯ ಸಮಯ ನಿರ್ವಹಣೆಯ ಕೌಶಲ್ಯವನ್ನು ನೀವು ಎಂದಾದರೂ ಗಮನಿಸಿದ್ದೀರಾ? ತಾಯಿಯು ತಾನು ಮಾಡುವ ಅಗಾಧವಾದ ಕೆಲಸದಿಂದ ಎಂದಿಗೂ ಹೊರೆಯಾಗುವುದಿಲ್ಲ. ನೀವು ನಿಮ್ಮ ತಾಯಿಯನ್ನು ಗಮನಿಸಿದರೆ, ನಿಮ್ಮ ಸಮಯವನ್ನು ಹೇಗೆ ಉತ್ತಮವಾಗಿ ನಿರ್ವಹಿಸುವುದು ಎಂದು ನಿಮಗೆ ಅರ್ಥವಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಹೇಳಿದರು.
ಮಕ್ಕಳ ಮೇಲೆ ಒತ್ತಡ ಹೇರಬೇಡಿ ಎಂದು ಪೋಷಕರಿಗೆ ಮನವಿ ಮಾಡಿದರು. ಆದರೆ ಅದೇ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಗಳನ್ನು ಕಡಿಮೆ ಅಂದಾಜು ಮಾಡಬಾರದು. “ಒತ್ತಡದಲ್ಲಿ ಉಳಿಯಬೇಡಿ, ಯೋಚಿಸಿ, ವಿಶ್ಲೇಷಿಸಿ, ಆಕ್ಟ್ ಮಾಡಿ, ತದನಂತರ ನೀವು ಏನನ್ನು ಬಯಸುತ್ತೀರೋ ಅದನ್ನು ಸಾಧಿಸಲು ನಿಮ್ಮ ಕೈಲಾದದ್ದನ್ನು ನೀಡಿ” ಎಂದು ಪ್ರಧಾನಿ ಮೋದಿ ಮಾತನಾಡಿದ್ದಾರೆ.